ಹುಬ್ಬಳ್ಳಿ : ಹುಬ್ಬಳ್ಳಿಯ ಸಾಯಿ ನಗರದಲ್ಲಿ ಡಿಸೆಂಬರ್ 22 ರಂದು ಸಂಭವಿಸಿದ್ದ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಒಟ್ಟು 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಅದರಲ್ಲಿ ನಾಲ್ವರು ಮೃತಪಟ್ಟಿದ್ದರು ಆದರೆ ಇದೀಗ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದು ಮೃತರ ಸಂಖ್ಯೆ ೫ ಕ್ಕೆ ಏರಿದೆ.
ಚಿಕಿತ್ಸೆ ಫಲಿಸದೇ ಮತ್ತೊರ್ವ ಮಾಲಾಧಾರಿ ಸಾವನ್ನಪ್ಪಿದ್ದು ಮೃತರನ್ನು ಶಂಕರ್ ಚವ್ಹಾಣ್ (29) ಎಂದು ತಿಳಿದಿದೆ. ಶಂಕರ ಧಾರವಾಡದ ಸತ್ತೂರು ನಿವಾಸಿಯಾಗಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮೃತ ದುರ್ದೈವಿಗಳು. ಇನ್ನುಳಿದ ನಾಲ್ವರು ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದ ಶಂಕರ್ ಚವ್ಹಾಣ್, ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶಂಕರ್ ಚವ್ಹಾಣ್ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆರೈಕೆಯಲ್ಲಿ ಬೆಳೆದಿದ್ದರು. ಶಂಕರ್ ಚವ್ಹಾಣ್ ಮೊದಲ ಬಾರಿ ಅಯ್ಯಪ್ಪನ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ತೀರ್ವವಾಗಿ ಗಾಯಗೊಂಡಿದ್ದರು.
ಇನ್ನು, ಚಿಂತಾಜನಕ ಸ್ಥಿತಿಯಲ್ಲಿರುವ ಮಂಜುನಾಥ್ ವಾಗ್ಮೋಡೆಯ ದೇಹ ಶೇ70 ರಷ್ಟು, ಪ್ರಕಾಶ್ ಬಾರಕೇರ್ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆಯ ದೇಹ ಶೇ74 ರಷ್ಟು ಸುಟ್ಟಿದೆ. ವಿನಾಯಕ್ ಭಾರಕೇರ್ ದೇಹ ಶೇ25 ರಷ್ಟು ಸುಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ.


