ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಧ್ವಜಕ್ಕೆ ವಂದನೆ ಸಲ್ಲಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಹಿರಿಯ ಪತ್ರಕರ್ತ ರಾಜೇಶ್ ರಾವ್ , ಸುಖಪಾಲ್ ಪೊಳಲಿ,ಪುಷ್ಪರಾಜ್ ಬಿ.ಎನ್,ಸಂದೀಪ್ ಐ.ಬಿ ಸೇರಿ ಕಾರ್ಯಕ್ರಮದಲ್ಲಿ 57 ಸಾಧಕರು ಮತ್ತು 24 ಪ್ರತಿಷ್ಠಿತ ಸಂಸ್ಥೆಗಳಿಗೆ 2024ನೇ ಸಾಲಿನ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರದಾನ ಮಾಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರಧಾನ ಮಾಡಿ ರಾಜ್ಯೋತ್ಸವ ಸಂದೇಶ ನೀಡಿದರು. ಅತ್ಯಧಿಕ ಜಿಎಸ್ ಟಿ ಸಂಗ್ರಹಿಸುವ ರಾಜ್ಯ ಕರ್ನಾಟಕವಾಗಿದ್ದರೂ ರಾಜ್ಯಕ್ಕೆ ಸಿಗಬೇಕಾದ ಪಾಲು ಸಿಗದ ಕಾರಣ ರಾಜ್ಯ ತೀವ್ರ ಆರ್ಥಿಕ ಅನ್ಯಾಯಕ್ಕೆ ಗುರಿಯಾಗಿದೆ ಎಂದರು.
ಕರ್ನಾಟಕವು ಜಿಎಸ್ ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೆ ಸ್ಥಾನದಲ್ಲಿದ್ದರೂ, ಹಣಕಾಸು ಆಯೋಗದಿಂದ ಸಿಗಬೇಕಾದ ಹಣದಲ್ಲಿ ತೀವ್ರ ಕಡಿತವಾಗಿದೆ. ನಮ್ಮ ರಾಜ್ಯದಲ್ಲಿ ತೆರಿಗೆಯನ್ನು ರಾಜ್ಯಕ್ಕೆ ಅನುಕೂಲಕ್ಕೆ ತಕ್ಕಂತೆ ವಿಧಿಸುವ ಅಧಿಕಾರ ಜಿಎಸ್ಪಿಯಿಂದ ಇಲ್ಲವಾಗಿದೆ. ಇದಕ್ಕೆ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣವೂ ಸಿಕ್ಕಿಲ್ಲ. ಇಂತಹ ಪರಿಸ್ಥಿತಿ ಯಾವ ರಾಜ್ಯಕ್ಕೂ ಬರಬಾರದು. ಕರ್ನಾಟಕ ರಾಜ್ಯೋತ್ಸವದ ಈ ದಿನದಂದು ಇದನ್ನು ನೆನಪಿಸಬೇಕಿದೆ. ನಮ್ಮ ಶ್ರಮದ ಪಾಲನ್ನು ಯಾರೋ ಅನ್ಯಾಯವಾಗಿ ಕಸಿದುಕೊಳ್ಳುತ್ತಿದ್ದಾರೆಂಬ ಭಾವನೆ ರಾಜ್ಯಗಳಿಗೆ ಬರಬಾರದು. ಕರ್ನಾಟಕ ಸರಕಾರ ಇದನ್ನು ಪ್ರಶ್ನಿಸಿದೆ. ರಾಜ್ಯದ ಹಿತಾಸಕ್ತಿ ಪರವಾಗಿ ಗಟ್ಟಿಯಾಗಿ ನಿಂತಿದೆ ಎಂದು ತಿಳಿಸಿದರು.
ಸ್ವಾತಂತ್ರ‍್ಯ ನಂತರ ಕರ್ನಾಟಕ ಜನಸಂಖ್ಯಾ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿ ಯಶಸ್ಸು ಕಂಡಿದೆ. ಆದರೆ ಶಿಕ್ಷಣದಲ್ಲಿ ಹಿಂದುಳಿದಿರುವ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಸಮರ್ಪಕವಾಗಿ ಅಳವಡಿಸದೆ ಇರುವ ಹಿಂದಿ ಮಾತನಾಡುವ ಉತ್ತಮ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸದಸ್ಯರನ್ನು ನೀಡಿ ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳಿಗೆ ಲೋಕಸಭಾ ಸದಸ್ಯರನ್ನು ಕಡಿಮೆ ಮಾಡಿ ಕೇಂದ್ರ ಮಟ್ಟದಲ್ಲಿ ದಕ್ಷಿಣ ಭಾರತ ಹಾಗೂ ಕರ್ನಾಟಕದ ಜನರ ಪ್ರಾತಿನಿಧ್ಯವನ್ನೇ ಇಲ್ಲವಾಗಿಸುವ ಕ್ರಮವನ್ನು ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕೋಡಿಕಲ್, ಶಾಸಕ ವೇದವ್ಯಾಸ್ ಕಾಮತ್, ಎಂಎಲ್ ಸಿ ಐವನ್ ಡಿಸೋಜಾ, ಕರ್ನಾಟಕ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.