ಬೆಂಗಳೂರು : ಟಾಕ್ಸಿಕ್ ಸಿನಿಮಾ ಚಿತ್ರೀಕರಣದ ವೇಳೆ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾಕಿರುವ ಕೃತ್ಯವು ಸ್ಯಾಟೆಲೈಟ್ ಚಿತ್ರಗಳಿಂದ ಬಯಲಾಗಿದೆ. ಈ ಬಗ್ಗೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.

ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಎಚ್ ಎಂ ಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ `ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರವಾಗಿದೆ ಎಂದಿದ್ದಾರೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಖಂಡ್ರೆ ಹೇಳಿದ್ದಾರೆ.
ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ , ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.


