ನವದೆಹಲಿ : ಭಾರತ ಮತ್ತು ಬಾಂಗ್ಲಾದೇಶ ನಡುವಿನ 3 ಟಿ20 ಪಂದ್ಯಗಳ ಸರಣಿಯು ಅಕ್ಟೋಬರ್ 6 ರಂದು ಆರಂಭವಾಗಲಿದೆ. ಮೊದಲ ಟಿ20 ಪಂದ್ಯ ಗ್ವಾಲಿಯರ್‌ನಲ್ಲಿ ನಡೆಯಲಿದೆ. ಈ ಸರಣಿಗೆ ಭಾರತ ತಂಡದಲ್ಲಿ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ.
2024ರ ಟಿ20 ವಿಶ್ವಕಪ್‌ನಲ್ಲಿ ರಿಂಕುಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಅವರು ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನದೊಂದಿಗೆ ತಂಡದಲ್ಲಿ ಸ್ಥಾನವನ್ನು ಭಧ್ರಪಡಿಸಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಸರಣಿಯಲ್ಲಿ ಅವರು ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಮೊದಲ ಹಾಗೂ ಕೊನೆಯ ಟಿ20 ಪಂದ್ಯಗಳಲ್ಲಿ ತಲಾ ಒಂದು ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.
ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ದಾಖಲೆ ಬರೆಯಲು ರಿಂಕು ಸಜ್ಜಾಗಿದ್ದಾರೆ. ಐಪಿಎಲ್ 2023 ರಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಅವರು ಕೊನೆಯ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಯಶ್ ದಯಾಳ್ ಅವರ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದ ರಿಂಕು ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು. ಆ ಒಂದು ಇನ್ನಿಂಗ್ಸ್ ರಿಂಕು ವೃತ್ತಿಜೀವನವನ್ನೇ ಬದಲಿಸಿತ್ತು. ಇದಾದ ಬಳಿಕ ಐದು ತಿಂಗಳಲ್ಲೇ ಭಾರತ ಪರ ಆಡುವ ಅದೃಷ್ಟ ಹುಡುಕಿ ಬಂದಿತ್ತು. ಈ ಘಟನೆಯನ್ನು ನೆನಪಿಸುವ ಟ್ಯಾಟೂ ಅನ್ನು ರಿಂಕು ತನ್ನ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ. ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
‘ಗಾಡ್ಸ್ ಪ್ಲಾನ್’ ಟ್ಯಾಟೂ ರಿಂಕು ಸಿಂಗ್ 2023ರ ಆಗಸ್ಟ್ 18 ರಂದು ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧ ಭಾರತಕ್ಕೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ರಿಂಕು ಭಾರತ ಟಿ20 ತಂಡದಲ್ಲಿದ್ದಾರೆ. ರಿಂಕು ಇದುವರೆಗೆ 23 ಟಿ20 ಪಂದ್ಯಗಳಲ್ಲಿ 418 ರನ್ ಗಳಿಸಿದ್ದಾರೆ. ಈಗ ಗ್ವಾಲಿಯರ್‌ನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೂ ಮುಂಚಿತವಾಗಿ ರಿಂಕು ಸಿಂಗ್ ಹೊಸ ಟ್ಯಾಟೂ ವೈರಲ್ ಆಗಿದೆ. ರಿಂಕು ಟ್ವೀಟರ್ (ಎಕ್ಸ್) ನಲ್ಲಿ ತನ್ನ ಕೈಯಲ್ಲಿ ‘ಗಾಡ್ಸ್ ಪ್ಲಾನ್’ ಎಂದು ಟ್ಯಾಟೂ ಹಾಕಿಸಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಟ್ಯಾಟೂ ರಿಂಕು ಐಪಿಎಲ್‌ನಲ್ಲಿ ಸಿಡಿಸಿದ ಐದು ಸಿಕ್ಸರ್‌ಗಳಿಗೆ ಸಂಬಂಧಿಸಿರುವುದಾಗಿದೆ. ದೇಹದ ತುಂಬಾ ಟ್ಯಾಟೂ ಹಾಕಿಸಿಕೊಳ್ಳುವುದು ವಿಶ್ವ ಕ್ರಿಕೆಟ್ನಲ್ಲಿಗಾಡವಾಗಿ ಹಬ್ಬಿದೆ. ಬಹಳಷ್ಟು ಕ್ರಿಕೆಟಿಗರು ಕೂಡ ಈ ಟ್ಯಾಟೂ ಹಾಕಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿರಾಟ್ಕೊಹ್ಲಿ, ಕೆಎಲ್ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಸೇರಿದಂತೆ ಟೀಮ್ ಇಂಡಿಯಾದ ಆಟಗಾರರು ಟ್ಯಾಟೂಗಳನ್ನು ದೇಹದಲ್ಲೆಲ್ಲ ಹಾಕಿಸಿಕೊಂಡಿದ್ದಾರೆ. ಸದ್ಯ ಇದೀಗ ಇವರ ಸಾಲಿಗೆ ಮತ್ತೊಬ್ಬ ಸ್ಟಾರ್ ಆಟಗಾರ ರಿಂಕು ಸಿಂಗ್ ಕೂಡ ಸೇರಿಕೊಂಡಿದ್ದಾರೆ.