ಬೆಂಗಳೂರು : ಮೊನ್ನೆ ತಾನೇ (BMTC) ನಿರ್ವಾಹಕನಿಗೆ ಬಿಹಾರ ಮೂಲದ ಯುವಕ ಚೂರಿ ಹಿರಿದಿದ್ದು ಈ ಹಿನ್ನೆಲೆ ತಮ್ಮನ್ನು ತಾವು ರಕ್ಷಿಸಲು ಪಿಸ್ತೂಲಿಗೆ ಬೇಡಿಕೆಯಿಟ್ಟ ಬೆನ್ನಲ್ಲೇ ಪ್ರಯಾಣಿಕ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಬಿಎಂಟಿಸಿ ವೋಲ್ವೋ ಬಸ್ ಗುರುವಾರ ಸಂಜೆ 4:15ರ ಸುಮಾರಿಗೆ ಅತ್ತಿಬೆಲೆಯಿಂದ ಮೆಜಸ್ಟಿಕ್ಗೆ ಹೋಗುತ್ತಿತ್ತು. ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್ನಿಂದ ಇಳಿದು, ಬ್ಯಾಗ್ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.ಈ ಬಗ್ಗೆ ಬಿಎಂಟಿಸಿ ಚಾಲಕರು ರಕ್ಷಣೆಗೆ ಅಧಿಕಾರಿಗಳ ಮೊರೆ ಹೋಗಿದ್ದಾರೆಂಬುದು ತಿಳಿದುಬಂದಿದೆ.