ಗದಗ : ಯಾವರೀತಿ ಬಾಂಗ್ಲಾದಲ್ಲಿ ಜನ ಪ್ರಧಾನಿ ಮನೆ ಹೊಕ್ಕರೋ ಅದೇ ರೀತಿ ನಮ್ಮ ದೇಶದಲ್ಲೂ ಪ್ರಧಾನಿ ಮನೆಗೆ ನುಗ್ಗೋದು ದೂರವಿಲ್ಲ ಎಂದು ಕಾಂಗ್ರೆಸ್ ಗದಗ ಜಿಲ್ಲೆಯ ರೋಣ ಶಾಸಕ ಜಿ ಎಸ್ ಪಾಟೀಲ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಗಜೇಂದ್ರಗಡದಲ್ಲಿ ನಿನ್ನೆ ನಡೆದ ಅಹಿಂದ ಒಕ್ಕೂಟದ ಪ್ರತಿಭಟನೆ ವೇಳೆ ಶಾಸಕ ಭಾಷಣದ ವೇಳೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದು ಬಿಜೆಪಿ ಹಾಗೂ ಮೋದಿ, ಶಾ ಅವರನ್ನ ಟೀಕಿಸುವ ಬರದಲ್ಲಿ ಶಾಸಕ ಯಡವಟ್ಟು ಮಾಡಿದ್ದಾರೆ .ನಾವೆಲ್ಲರೂ ಒಂದಾಗಬೇಕು ಗಟ್ಟಿಯಾಗಬೇಕು, ಧ್ವನಿಗಟ್ಟಿಗೊಳಿಸಬೇಕು,ಹೋರಾಟ ಮುಂದುವರೆಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಅವರು ರಾಜಕೀಯ ಜೀವನದ ಉದ್ದಕ್ಕೂ ಅಂಥದ್ದನ್ನೇ ಮಾಡಿಕೊಂಡು ಬಂದವರು. ಅಂಥವರ ಕೈಗೆ ನಾವು ದೇಶ ಕೊಟ್ಟಿದ್ದೇವೆ. ಈ ದೇಶ ಯಾವ ರೀತಿ ಮುನ್ನಡೆಯಬೇಕು ಎಂಬ ಬಗ್ಗೆ ನಾವು ಯೋಚಿಸಬೇಕು. ಬಾಂಗ್ಲಾದೇಶದಲ್ಲಿ ಜನ ಪ್ರಧಾನಿ ಮನೆಗೆ ಹೊಕ್ಕಂತೆ ಈ ದೇಶದಲ್ಲಿಯೂ ನುಗ್ಗುವ ದಿನ ಬಹಳ ದೂರ ಇಲ್ಲ. ಅದಕ್ಕೇ ಹೇಳುತ್ತಿದ್ದೇನೆ, ನಾವೆಲ್ಲ ಒಂದಾಗಬೇಕು. ಗಟ್ಟಿಯಾಗಬೇಕು. ನಮ್ಮ ಧ್ವನಿ ಗಟ್ಟಿಯಾಗಬೇಕು, ನಮ್ಮ ಹೋರಾಟ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹುನ್ನಾರ ನಡೆಸುತ್ತಿದೆ ಮೋದಿ, ಅಮಿತ್ ಶಾ ರಾಜಕೀಯ ಹೀಗೆ ಮಾಡುತ್ತಾ ಬಂದಿದ್ದಾರೆ ಇವತ್ತು ಅಂಥವರ ಕೈಯಲ್ಲಿ ದೇಶಕೊಟ್ಟಿದಿವಿ ಎಂದು ಜಿಎಸ್ ಪಾಟೀಲ್ ವಿವಾದಾತ್ಮಕ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪಾಟೀಲ್ ಹೇಳಿಕೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಶಾಸಕರ ಬುದ್ಧಿಯೇ ಅಷ್ಟೆ ಎಂದು ಅವರು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು, ಶಾಸಕರಿಗೆ ಜಾಸ್ತಿ ತಿಳವಳಿಕೆ ಇಲ್ಲ. ಚುನಾವಣೆಯಲ್ಲಿ ಗೆದ್ದು ಬಂದಿದ್ದಕ್ಕೆ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ರಾಜ್ಯವನ್ನು ಹದೆಗೆಡಿಸಿದ್ದಾರೆ, ಒಂದೂ ಅಭಿವೃದ್ಧಿ ಕೆಲಸ ಮಾಡಿಲ್ಲ ಏನಿಲ್ಲಾ. ಸುಡಗಾಡು ಅದೂ ಇದೂ ಕೊಡುತ್ತೇನೆಂದು ಜನರ ತಲೆ ಕೆಡಿಸಿ ಅಧ್ವಾನಕ್ಕೆ ತಂದಿಟ್ಟಿದ್ದಾರೆ. ಸಿದ್ದರಾಮಯ್ಯ ಈಗಾ ಅಹಿಂದ ಎಂದು ಹೇಳುತ್ತಿರುವುದು ತಪ್ಪು ಎಂದು ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.