ಬೆಂಗಳೂರು : ಮುಡಾ ಪ್ರಕರಣದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಲ್ಲದೇ, ಬಾಂಗ್ಲಾದೇಶ ಪ್ರಧಾನಿಯಂತೆ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ Z ಕೆಟಗರಿ ಸೆಕ್ಯೂರಿಟಿ ನೀಡಿದೆ. ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿದ್ದಾರೆ. ಆಗಸ್ಟ್ 29ರವರೆಗೆ ಎಲ್ಲ ಸಾರ್ವಜನಿಕ ಕಾರ್ಯಕ್ರಮ ಮುಂದೂಡಿದ್ದಾರೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಸಂಪುಟದ ಮಂತ್ರಿಗಳು, ಶಾಸಕರ ಆಕ್ರೋಶ ತೀವ್ರವಾಗಿದೆ. ಹೀಗಾಗಿ ರಾಜ್ಯಪಾಲರು ಎಚ್ಚರಿಕೆಯಿಂದ ಇದ್ದಾರೆ. ಈ ಹಿಂದೆ ಬುಲೆಟ್ ಪ್ರೂಫ್ ಕಾರು ಇದ್ದರೂ ಅದನ್ನು ಬಳಕೆ ಮಾಡದೆ ಸಾಮಾನ್ಯ ಕಾರಿನಲ್ಲೇ ಓಡಾಡುತ್ತಿದ್ದರು. ಆದರೆ ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಬುಲೆಟ್ ಪ್ರೂಫ್ ಕಾರು ಬಳಸುತ್ತಿದ್ದಾರೆ.
ಇಷ್ಟು ದಿನ ಅವಕಾಶ ಇದ್ದರೂ ನಾರ್ಮಲ್ ಇನ್ನೋವಾ ಕಾರನ್ನು ಬಳಸುತ್ತಿದ್ದ ರಾಜ್ಯಪಾಲರು ಇದೀಗ ಬುಲೆಟ್ ಫ್ರೂಫ್ ಕಾರನ್ನು ಬಳಸಲು ಆರಂಭಿಸಿದ್ದಾರೆ. ರಾಜ್ಯಪಾಲರು ಅಧಿಕಾರ ಸ್ವೀಕರಿಸಿದಾಗಲೇ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕಾರನ್ನು ವಾಪಸ್ ಕಳುಹಿಸಿದ್ದರು. ಈಗ ಮತ್ತೆ ಗುಪ್ತಚರ ಇಲಾಖೆಯಿಂದ ಸೂಚನೆ ಬಂದ ನಂತರ ಬುಲೆಟ್ ಪ್ರೂಫ್ ಕಾರಿನ ವ್ಯವಸ್ಥೆ ಮಾಡಲಾಗಿದೆ.


