ಮಂಗಳೂರು : ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಮಾತಿದೆ. ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಆಚರಿಸಲಾಗುತ್ತದೆ. ಕರಾವಳಿ ಭಾಗದಲ್ಲಿ ಈ ಹಬ್ಬದ ಆಚರಣೆಯೊಂದಿಗೆ ಸಾಲು ಸಾಲು ಹಬ್ಬಗಳಿಗೆ ನಾಂದಿಯಾಗುತ್ತದೆ. ಪತ್ತನಾಜೆಯ ಬಳಿಕ ಸ್ಥಗಿತಗೊಂಡ ಹಬ್ಬಗಳ ಪರ್ಯಟನೆ ಇಂದು ಆರಂಭವಾಗುತ್ತದೆ. ನಾಗರ ಪಂಚಮಿಯ ಅಂಗವಾಗಿ ದಕ್ಷಿಣ ಭಾರತದ ಅತ್ಯಂತ ಪವಿತ್ರ ನಾಗಾರಾಧನಾ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಸಹಿತ ಕರಾವಳಿಯ ವಿವಿಧ ನಾಗಾರಾಧನಾ ಕ್ಷೇತ್ರಗಳಲ್ಲಿ ಇಂದು ಶ್ರದ್ಧಾ ಭಕ್ತಿಯ ನಾಗರ ಪಂಚಮಿ ಆಚರಣೆ ನಡೆಯುತ್ತಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳು, ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗರಪಂಚಮಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳೂರಿನ ಕಾವು ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರಿನ ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಭಕ್ತರು ದೇವಾಲಯಗಳ ದೇವಾಲಯಗಳ ನಾಗಸನ್ನಿಧಿ ಮತ್ತು ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ನಾಗನಿಗೆ ತನುವನ್ನು ಎರೆದರು. ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಹಾಲಿನ ಅಭಿಷೇಕ ಮತ್ತು ಸೀಯಾಳಾಭಿಷೇಕ ಹಾಗೂ ತಂಬಿಲ ಸೇವೆ ನಡೆಸಿದರು. ಕುಟುಂಬದ ಮೂಲ ನಾಗಬನಗಳು ಎಲ್ಲೆಲ್ಲೋ ಇರುವುದರಿಂದ ಕೆಲವೊಂದು ರೂಟ್ ಗಳ ಬಸ್ಸುಗಳಲ್ಲಿ ಭಕ್ತರ ದಟ್ಟಣೆ ಕಂಡು ಬಂತು. ಹಿಂದೂ ಧರ್ಮದಲ್ಲಿ ನಾಗನನ್ನು ದೇವರ ರೂಪವೆಂದು ಪರಿಗಣಿಸಲಾಗಿದೆ. ಹಾಗಾಗಿ ನಾಗನನ್ನು ಪೂಜಿಸಲಾಗುತ್ತದೆ. ಮಹಾದೇವನ ಕೊರಳನ್ನು ವಾಸುಕಿ ಎಂಬ ನಾಗದೇವತೆ ಸುತ್ತಿಕೊಂಡಿದ್ದು, ಶ್ರೀ ವಿಷ್ಣು ಶೇಷನಾಗನ ಮೇಲೆ ವಿಶ್ರಾಂತಿ ಪಡೆಯುತ್ತಾನೆ. ಈ ಹಿನ್ನೆಲೆಯಲ್ಲಿ ಪ್ರಾಚೀನ ಕಾಲದಿಂದಲೂ ಹಾವುಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ನಾಗನನ್ನು ಪೂಜಿಸುವವರಿಗೆ ಮಹಾದೇವನ ಕೃಪೆ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾಗನಿಗೆ ಹಸಿ ಹಾಲು ಮತ್ತು ಎಲೆಗಳನ್ನು ನೈವೇದ್ಯ ಮಾಡಲಾಗುತ್ತದೆ. ಇಂದು ಭಕ್ತರು ಸೀಯಾಳಾಭಷೇಕ, ಹಾಲಿನ ಅಭಿಷೇಕ, ತಂಬಿಲ ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ.

ನಾಗಾರಾಧನೆಯ ಪುಣ್ಯ ಕ್ಷೇತ್ರವಾಗಿರುವ ಮಂಗಳೂರು ತಾಲೂಕಿನ ಕುಡುಪು ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಾಗರ ಪಂಚಮಿ ಹಬ್ಬ ವಿಶೇಷ ಸಂಭ್ರಮದಿಂದ ನಡೆಯಿತು. ಸಾವಿರಾರು ಮಂದಿ ಭಕ್ತರು ಆಗಮಿಸಿ ಶ್ರೀ ವಾಸುಕಿ ನಾಗರಾಜ ಸ್ವಾಮಿ ದರುಶನ ಪಡೆದರು. ತಮ್ಮ ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ, ತನು, ತಂಬಿಲಗಳನ್ನು ಅರ್ಪಿಸಿದರು. ನಸುಕಿನ ಜಾವದಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ನವಕ, ಸಹಸ್ರನಾಮಾರ್ಚನೆ, ಮಧ್ಯಾಹ್ನ ಹರಿವಾಣ ನೈವೇದ್ಯ ಸೇವೆ ಕುಡುಪುವಿನಲ್ಲಿ ನಡೆಯಿತು. ಬಳಿಕ ಕ್ಷೇತ್ರದಲ್ಲಿ ನಾಗತಂಬಿಲ ವಿಶೇಷವಾಗಿ ನಿರಂತರವಾಗಿ ನಡೆಯಿತು. ರೋಗರುಜಿನಗಳನ್ನು ದೂರ ಮಾಡಲು, ತಮ್ಮ ಇಷ್ಟಾರ್ಥ ಈಡೇರಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಭಕ್ತರು ನೆರವೇರಿಸಿದರು.

ನಾಡಿನೆಲ್ಲೆಡೆ ಭಕ್ತರು ಕಲ್ಲ ನಾಗನಿಗೆ ಹಾಲೆರೆದರೆ ಉಡುಪಿಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ. ನಾಗದೇವರಿಗೆ ಜಲಾಭಿಷೇಕ, ಶ್ರೀಯಾಲಭಿಷೇಕ ಮಾಡಿದ ಕಾಪು ಮೂಲದ ಮಜೂರು ಗ್ರಾಮದ ಗೋವರ್ಧನ್ ರಾವ್ ಅವರು ಪ್ರತೀ ವರ್ಷವೂ ಜೀವಂತ ನಾಗನಿಗೆ ಹಾಲು ಎರೆಯುವ ಮೂಲಕ ನಾಗರಪಂಚಮಿ ಆಚರಿಸುತ್ತಿದ್ದಾರೆ. ಪ್ರತಿ ವರ್ಷ ಗಾಯಗೊಂಡ ನಾಗಗಳನ್ನು ತಂದು ಆರೈಕೆ ಮಾಡುತ್ತಿದ್ದಾರೆ. ಈ ಬಾರಿ 4 ನಾಗ ಮನೆಯಲ್ಲಿದ್ದು ಆರೈಕೆಗೊಂಡ ನಾಗ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.


