ಸುಬ್ರಹ್ಮಣ್ಯ ; ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇನ್ನು ಪಶ್ಚಿಮ ಘಟ್ಟ ವ್ಯಾಪ್ತಿಯ ಕುಮಾರಧಾರ, ಚಾರ್ಮಾಡಿ, ಶಿರಾಡಿ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯಲು ಆರಂಭಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುವ ಕುಮಾರಧಾರ ನದಿಯಿಂದ ಇಲ್ಲಿನ ಸ್ನಾನಘಟ್ಟ ಎರಡು ಭಾರಿ ಮುಳುಗಡೆಯನ್ನು ಕಂಡಿದ್ದು ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ.
ಇದೇ ಸಂದರ್ಭದಲ್ಲಿ ಸೋಮವಾರ ರಾತ್ರಿ ನದಿಯಲ್ಲಿ ನೀರು ಎಷ್ಟಿದೇ ಎಂದು ನೋಡಲು ಹೋದ ವ್ಯಕ್ತಿಗೆ ಆನೆಯ ಕಳೇಬರವೊಂದು ಕಾಣಿಸಿದೆ. ಸ್ಥಳೀಯ ಮನ್ಮಥ ಬಟ್ಟೋಡಿ ಎಂಬವರು ಲೈಟ್ ಹಾಕಿ ನೋಡಿದಾಗ ಆನೆಯ ಕಳೇಬರ ನದಿಯಲ್ಲಿ ತೇಲಿಕೊಂಡು ಹೋಗುವುದು ಕಾಣಿಸಿದೆ. ಆದರೆ ಇಂದು ಮುಂಜಾನೆಯ ವೇಳೆಗೆ ನೋಡಿದಾಗ ಆನೆಯ ಕಳೇಬರ ನದಿಯಲ್ಲಿ ಕಾಣಿಸಿಲ್ಲ. ಆದ್ರೆ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಮನ್ಮಥ ಅವರು ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯ ಕಳೇಬರಕ್ಕಾಗಿ ನದಿ ತೀರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.


