ಕಲಬುರಗಿ : ಸರ್ಕಾರ ಮತ್ತು ಇಲಾಖೆಯಿಂದ ವರ್ಗಾವಣೆಯ ಎಡವಟ್ಟಿನಿಂದಾಗಿ 6 ತಿಂಗಳ ಹಿಂದೆ ಮೃತಪಟ್ಟ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜನಿಯರ್ ಅಶೋಕ ಪುಟಪಾಕ್ ಎಂಬ ಅಧಿಕಾರಿಯನ್ನು ಜುಲೈ 9 ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನೆವರಿ 12 ರಂದು ಮೃತ ಪಟ್ಟಿದ್ದರು. ಈ ವರ್ಗಾವಣೆಯ ಪ್ರತಿ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು ನಗರಾಭಿವೃದ್ಧಿ ಇಲಾಖೆ ಹಾಸ್ಯಾಸ್ಪದ ಎಡವಟ್ಟು ಮಾಡಿಕೊಂಡಿದೆ.
ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜನಿಯರ್ ಆಗಿ ಕೆಲಸ ಮಾಡ್ತಿದ್ದ ಅಶೋಕ್ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ. ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ ಹಾಗಿದ್ದರೆ ಈ ಆರು ತಿಂಗಳು ಸಂಬಳವೂ ಅವರ ಖಾತೆಗೆ ಜಮೆ ಆಗುತ್ತಿತ್ತೇ? ಈ ಪ್ರಶ್ನೆಗೆ ಇಲಾಖೆ ಇನ್ನೂ ಉತ್ತರಿಸಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಸಂಭವಿಸಿರುವ ಈ ಎಡವಟ್ಟು ಇಲಾಖೆಗೂ ಸಚಿವರಿಗೂ ಇದೀಗ ಮುಜುಗರ ಸೃಷ್ಟಿಸಿದೆ.