ಕುಂದಾಪುರ : ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ವ್ಯಾಪ್ತಿಯ ನಂದ್ರೊಳ್ಳಿ ಎಂಬಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬಲಿಯಾದವರನ್ನು ವಂಡ್ಸೆಯ ಶಾಲೆಯೊಂದರಲ್ಲಿ ಓದುತ್ತಿದ್ದ ಧನರಾಜ್ ಸತೀಶ್ (13) ಮತ್ತು ಛಾಯಾ ಸತೀಶ್ (7) ಎಂದು ಗುರುತಿಸಲಾಗಿದೆ. ಸದ್ಯ ಅವರ ತಾಯಿ ಶೀಲಾ (34) ಮತ್ತು ತಂದೆ ಸತೀಶ್ ಮಡಿವಾಳ ಸ್ಥಿತಿ ಗಂಭೀರವಾಗಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಲಾ ಅವರ ಸ್ಥಿತಿಯು ಸುಧಾರಣೆಯ ಲಕ್ಷಣಗಳನ್ನು ತೋರಿಸಿದೆ ಎಂದು ವರದಿಯಾಗಿದೆ.
ಶೀಲಾ ರವರ ಪತಿ ಸತೀಶ್ ಮಡಿವಾಳ ವಿಜಯಪುರದಲ್ಲಿ ಹೋಟೆಲ್ ಒಂದರಲ್ಲಿ ಕೆಲಸಮಾಡುತ್ತಿದ್ದು ಇಬ್ಬರು ಮಕ್ಕಳು ಹಾಗೂ ಪತ್ನಿ ಶೀಲಾ ವಂಡ್ಸೆಯಲ್ಲಿ ನೆಲೆಸಿದ್ದರು.ಇಂದು ಮನೆಯ ಹತ್ತಿರದಲ್ಲಿರುವ ಕೆರೆಯಲ್ಲಿ ಛಾಯಾ ಕಾಲುಜಾರಿ ಬಿದ್ದಂತಹ ಸಂದರ್ಭದಲ್ಲಿ ಧನರಾಜ್ ರಕ್ಷಿಸಲು ಹೋಗಿದ್ದನು ಆ ಬಳಿಕ ತಾಯಿ ಮಕ್ಕಳ ರಕ್ಷಣೆಗೆಂದು ಹೋಗಿ ಕೆರೆಯಲ್ಲಿ ಮುಳುಗಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಘಟನೆ ಕಂಡುಬಂದಿದ್ದು ಸ್ಥಳೀಯರನ್ನು ಕರೆದು ರಕ್ಷಿಸಲು ಹೊರಟ ಸಂದರ್ಭದಲ್ಲಿ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.ಶೀಲಾ ರವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.


