ಹಾಸನ : ವಿಶೇಷ ತನಿಖಾ ಅಧಿಕಾರಿಗಳು ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಮತ್ತು ಕಚೇರಿಯ ಸಿಬ್ಬಂದಿ ಚೇತನ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ತೀವ್ರಗೊಳಿಸಿದ್ದಾರೆ.
ಬೇಲೂರಿನ ಕಾಂಗ್ರೆಸ್ ಕಾರ್ಯಕರ್ತನಾಗಿರುವ ಹಾಸನದಾದ್ಯಂತ ಅಶ್ಲೀಲ ವಿಡಿಯೊವನ್ನು ಪೆನ್ ಡ್ರೈವ್ ಮೂಲಕ ಹಂಚಿಕೆ ಮಾಡಿದ ಆರೋಪ ಚೇತನ್ ಮೇಲೆ ಕೇಳಿಬಂದಿತ್ತು. ಈ ಸಂಬಂಧ ಹಾಸನ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಈ ಕೇಸ್ ಎಸ್‌ಐಟಿಗೆ ವರ್ಗಾವಣೆಯಾಗಿತ್ತು. ಇದೀಗ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇನ್ನಿಬ್ಬರು ಪ್ರಮುಖ ಆರೋಪಿಗಳಾದ ನವೀನ್ ಗೌಡ ಹಾಗೂ ಪುಟ್ಟಿ @ ಪುಟ್ಟರಾಜುವಿಗಾಗಿ ಪೊಲೀಸರು ಹುಡುಕಾಟವನ್ನು ಮುಂದುವರಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ್ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿತು. ಬಳಿಕ ಪ್ರಕರಣ ಎಸ್‌ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರು ಇದೇ ಮೇ15ರಂದು ಬೆಂಗಳೂರಿಗೆ ವಾಪಸ್ ಬರುತ್ತಾರೆ ಅನ್ನೋ ಮಾಹಿತಿ ಇತ್ತು. ಮೇ15ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ವಾಪಸ್ ಬಂದ್ರೆ ಅವರನ್ನು ಅರೆಸ್ಟ್ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೀಗ ಪ್ರಜ್ವಲ್ ರೇವಣ್ಣ ಅವರು ಮೇ15ಕ್ಕೆ ವಾಪಸ್ ಆಗಲು ಬುಕ್ ಮಾಡಿದ್ದ ಟಿಕೆಟ್ ಅನ್ನೇ ಕ್ಯಾನ್ಸಲ್ ಮಾಡಿದ್ದಾರೆ.ಜರ್ಮನಿಯ ಲುಫ್ತಾನ್ಸಾ ಏರ್ಲೈನ್ಸ್ನಲ್ಲಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಆಗಿತ್ತು. ಆದ್ರೀಗ ಬುಕ್ ಮಾಡಲಾಗಿದ್ದ ಟಿಕೆಟ್ ಕ್ಯಾನ್ಸಲ್ ಆಗಿದ್ದು, ಸದ್ಯಕ್ಕೆ ಪ್ರಜ್ವಲ್ ರೇವಣ್ಣ ಅವರು ರಾಜ್ಯಕ್ಕೆ ಮರಳೋದೇ ಅನುಮಾನವಾಗಿದೆ.
ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ SIT ಅಧಿಕಾರಿಗಳು ನೋಟಿಸ್ ಕೊಟ್ರೂ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಕೇಸ್ನ ಆರೋಪಿ ಪ್ರಜ್ವಲ್ ರೇವಣ್ಣ ಅವರು 14 ದಿನವಾದ್ರೂ ನಾಪತ್ತೆ ಆಗಿದ್ದಾರೆ.


