ಹಾಸನ : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮನಮರ್ಯಾದಿ ಕಳೆದುಕೊಂಡ ದೊಡ್ಡ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದ ಬೆನ್ನಲ್ಲೇ ಬೆಂಗಳೂರಿನಿಂದ ಹೊಳೆನರಸೀಪುರದ ಮನೆಗೆ ಬಂದಿರುವ ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ, ದೇವರ ಮೊರೆ ಹೋಗಿದ್ದಾರೆ. ಮನೆ ಸಮೀಪದ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅವರು, ಮನೆಯಲ್ಲಿಯೂ ಹೋಮ-ಹವನ ನೆರವೇರಿಸಿದ್ದಾರೆ.
ರಾಜಕೀಯದಲ್ಲಿ ಯಾವಾಗಲು ಲಿಂಬೆ ಹಣ್ಣನ್ನು ಹಿಡಿದು ಸುತ್ತಾಡುತ್ತಿದ್ದ ರೇವಣ್ಣರಿಗೆ ಈ ಬಾರಿ ಬಿಸಿಲಿನ ಬೇಗೆಗೆ ಲಿಂಬೆ ಹಣ್ಣಿನ ಶಕ್ತಿ ಬಾಡಿಹೋಗಿದೆ.ಅದರಿಂದ ತಮ್ಮ ಕುಟುಂಬಕ್ಕೆ ಬಂದ ಸಂಕಷ್ಟವನ್ನು ನಿವಾರಿಸಲು ಇಂದು ಮುಂಜಾನೆ ಮಾಜಿಸಚಿವ ಎಚ್.ಡಿ.ರೇವಣ್ಣ ಹಾಗೂ ಭವಾನಿರೇವಣ್ಣ ಮನೆಯಲ್ಲಿಯೇ ಹೋಮ, ಹವನದಲ್ಲಿ ಭಾಗಿಯಾಗಿದ್ದಾರೆ. ಮನೆಯಲ್ಲೇ ಹೋಮ ಕುಂಡ ನಿರ್ಮಿಸಿರುವ ರೇವಣ್ಣ ಹೋಮ-ಹವನ ಮಾತ್ರವಲ್ಲದೆ, ಬೆಳಗ್ಗೆಯಿಂದಲೇ ವಿವಿಧ ಪೂಜೆಯನ್ನೂ ಮಾಡಿಸಿದ್ದಾರೆ. ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಹೆಚ್ಡಿ ರೇವಣ್ಣ ಹೊಳೆನರಸೀಪುರಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ತಡರಾತ್ರಿ ಹೊಳೆನರಸೀಪುರ ನಿವಾಸಕ್ಕೆ ಬಂದ ರೇವಣ್ಣ, ಇಂದು ಬೆಳಗ್ಗೆಯೇ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವೇಶ್ವರ, ಲಕ್ಷ್ಮೀ ನರಸಿಂಹ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೊಳೆನರಸೀಪುರದ ಮನೆಯಲ್ಲಿ ಸದಾ ಜನ ತುಂಬಿತಿದ್ದು ಆದರೆ, ಇಂದು ರೇವಣ್ಣ ಮನೆ ಖಾಲಿಖಾಲಿಯಾಗಿದೆ. ಪುತ್ರನ ಗಾಂಚಲಿ ಕೆಲಸ ಕಾರ್ಯದಿಂದ ಕುಟುಂಬವೇ ತಲೆತಗ್ಗಿಸುವಂತಾಗಿದೆ.ಈ ಮಧ್ಯೆ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ರೇವಣ್ಣ ನಿವಾಸದ ಗೋಡೆಗೆ ಬುಧವಾರ ಬೆಳಗ್ಗೆ ನೋಟಿಸ್ ಅಂಟಿಸಿದೆ. ಮೇ 4ರಂದು ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಮೇ 4ರಂದು ಹಾಜರಾಗುವುದಾಗಿ ರೇವಣ್ಣ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಳೆನರಸೀಪುರದಲ್ಲಿ ಪೂರ್ಣಹುತಿ ಹೋಮ ಮುಗಿಸಿ ಮನೆಯಿಂದ ಹೊರಟ ರೇವಣ್ಣ ದಂಪತಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದು ಎಸ್ಐಟಿ ಅವರು ಮನೆಗೆ ನೋಟೀಸ್ ಅಂಟಿಸಿದ್ದಾರೆ,ಅದರಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಲ್ಲದನ್ನು ಎದುರಿಸುತ್ತೇನೆ, ಎಲ್ಲಾ ಸರಿ ಹೋಗುತ್ತೆ ಎಂದು ಹೇಳಿದ್ದಾರೆ.


