ಬೆಂಗಳೂರು : ಹುಚ್ಚು ಅಭಿಮಾನ ಪ್ರಾಣಕ್ಕೆ ಕುತ್ತು ಎಂಬಂತೆ ಈ ಹುಚ್ಚು ಅಭಿಮಾನದಿಂದ ಏನೆಲ್ಲ ಅನಾಹುತವಾಗುತ್ತದೆ ಎಂಬ ಪರಿವಿಲ್ಲದ ಜನ ಪಂದ್ಯ ನಡೆಯುವ ವೇಳೆ ಹೋಗಿ ಕಾಲಿಗೆ ಬಿದ್ದು ಇನ್ನಿತರರಿಂದ ಒದೆ ತಿನ್ನುವ ವಿಡಿಯೋ ವೈರಲ್ ಆಗಿದೆ.
ಆರ್ಸಿಬಿ ಟಿ-20 ಐಪಿಎಲ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ನಡೆದ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು, ಕಾಲಿಗೆ ಬಿದ್ದಿದ್ದನು. ಭದ್ರತಾ ಸಿಬ್ಬಂದಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಹಿಡಿದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.ಇದೀಗ ಹಲ್ಲೆ ಮಾಡಿದ ಮೈದಾನದ ಸಿಬ್ಬಂದಿ ವಿರುದ್ಧ ಬೆಂಗಳೂರು ನಿವಾಸಿಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.
ರಾಯಚೂರು ಮೂಲದವನು ಎನ್ನಲಾದ ಅಭಿಮಾನಿಯೊಬ್ಬ ಪಂದ್ಯ ನಡೆಯುವ ವೇಳೆಯೇ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಅನಧಿಕೃತವಾಗಿ ನುಗ್ಗಿದ್ದಲ್ಲದೆ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು, ಅವರ ಕಾಲಿಗೆ ಬಿದ್ದು ಅಭಿಮಾನವನ್ನು ತೋರಿಸಿದ್ದಾನೆ.ಆದರೆ, ಅಭಿಮಾನಿಯನ್ನೇ ಹಿಂಬಾಲಿಸಿಕೊಂಡು ಬಂದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದಲೇ ಆತನ ಮೇಲೆ ಹಲ್ಲೆ ಮಾಡುತ್ತಾ ಮೈದಾನದ ಹೊರಗೆ ಎಳೆದುಕೊಂಡು ಬಂದಿದ್ದಾರೆ.ಭದ್ರತಾ ಸಿಬ್ಬಂದಿ ಹುಚ್ಚು ಅಭಿಮಾನಿಯನ್ನು ಅಜ್ಞಾತ ಸ್ಥಳಕ್ಕೆ ಕೊಂಡುಹೋಗಿ ಹಿಗ್ಗಾ ಮುಗ್ಗ ಥಳಿಸಿದ್ದಲ್ಲದೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆಂದು ವರದಿಯಾಗಿದೆ.
ಕ್ರೀಡಾಂಗಣಕ್ಕೆ ನುಗ್ಗಿ ಬರುವುದು ಕಾನೂನಿನ ಪ್ರಕಾರ ಅಪರಾಧ ಎಂಬುದು ಎಲ್ಲರಿಗೂ ತಿಳಿದ ವಿಚಾರ.ಅ ಯುವಕ ಮಾಡಿದ ತಪ್ಪಿಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅದೇ ಕಾರಣಕ್ಕೆ ಲಕ್ಷಾಂತರ ಜನ ಸೇರಿರುವ ಜಾಗದಲ್ಲೇ ಈ ರೀತಿ ಮನಸೋಇಚ್ಛೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರ ನೀಡಿದವರು ಯಾರು ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಮೈದಾನದ ಭದ್ರತೆಗೆ ಇರುವ ಸಿಬ್ಬಂದಿಗೆ ಹಲ್ಲೆ ಮಾಡುವ ಅಧಿಕಾರ ಯಾರು ಕೊಟ್ಟಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಮಾನವ ಆಯೋಗಕ್ಕೆ ದೂರು ಸಲ್ಲಿಸಿದ್ದು ಹಲ್ಲೆಗೆ ಒಳಗಾದ ಯುವಕನಿಗೆ ವೈದ್ಯಕೀಯ ವೆಚ್ಚವನ್ನು ಸರ್ಕಾರ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯವರೇ ಬರಿಸುವಂತೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಯುವಕನಿಗೆ ನ್ಯಾಯ ಕೊಡಿಸಿ ಮಾನವ ಹಕ್ಕುಗಳನ್ನ ರಕ್ಷಿಸಬೇಕಾಗಿ ಮಾನವೀಯತೆ ದೃಷ್ಟಿಯಿಂದ ತಮ್ಮಲ್ಲಿ ದೂರು ನೀಡುತ್ತಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್ ಅವರು ಮಾನವ ಹಕ್ಕುಗಳಿಗೆ ದೂರು ದಾಖಲಿಸಿದ್ದಾರೆ.


