ಬೆಂಗಳೂರು : ಬಿಜೆಪಿ ಟಿಕೆಟ್ ವಂಚಿತರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಎಂ.ಪಿ.ರೇಣುಕಾಚಾರ್ಯ ಹಾಗೂ ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಲು ಗಂಭೀರ ಪ್ರಯತ್ನ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಈ ನಾಲ್ವರೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದಲ್ಲಿ ಸಮುದಾಯದ ಮುಖಂಡರ ಜತೆ ಮಂಗಳವಾರ ಸಭೆ ನಡೆಸಿದ ಮಾಜಿ ಸಿಎಂ ಸದಾನಂದಗೌಡ, ಬಿಜೆಪಿ ಲಿಂಗಾಯತ ಸಮುದಾಯಕ್ಕೆ 8 ಟಿಕೆಟ್ ನೀಡಿದ್ದು, ಒಕ್ಕಲಿಗರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. 8 ಜನ ಒಕ್ಕಲಿಗರಿಗೂ ಟಿಕೆಟ್ ನೀಡದೇ ಹೋದರೆ ಅನ್ಯಪಕ್ಷದ ಕಡೆಗೆ ಗಮನಹರಿಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆ ನಡುವೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನಗೊಂಡ ಸದಾನಂದಗೌಡ ಅವರ ಬಳಿಗೆ ಕೆಲವು ಆಪ್ತರನ್ನು ಕಳುಹಿಸಿ ಸಮಾಧಾನಪಡಿಸುವ ಪ್ರಯತ್ನ ನಡೆಸಿದರಾದರೂ ಫಲಪ್ರದವಾಗಿಲ್ಲ. ದೆಹಲಿಯಿಂದ ವರಿಷ್ಠರೇ ಸದಾನಂದಗೌಡರಿಗೆ ದೂರವಾಣಿ ಕರೆ ಮಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದರೆ ಟಿಕೆಟ್ ನೀಡಲು ಸಿದ್ಧ ಎಂದೂ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಸದಾನಂದಗೌಡರು ಬೆAಗಳೂರು ಉತ್ತರ ಬಿಟ್ಟು ಬೇರೆಲ್ಲೂ ಸ್ಪರ್ಧಿಸುವುದಿಲ್ಲ. ಟಿಕೆಟ್ ಕೊಡದಿದ್ದರೆ ನನ್ನ ದಾರಿ ನನಗೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಬುಧವಾರ ತಮ್ಮ ನಿರ್ಧಾರ ಪ್ರಕಟಿಸಲು ಪತ್ರಿಕಾಗೋಷ್ಠಿ ನಡೆಸುವುದಾಗಿಯೂ ಹೇಳಿರುವುದು ಬಿಜೆಪಿ ವರಿಷ್ಠರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಮಾಜಿ ಸಚಿವರಾದ ಜೆ.ಸಿ ಮಧು ಸ್ವಾಮಿ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದು ಮಾಜಿ ಸಚಿವ ಸೋಮಣ್ಣ ರವರಿಗೆ ಟಿಕೆಟ್ ನೀಡಿದಕ್ಕೆ ಬಂಡಾಯ ಸಾರಿದ್ದಾರೆ. ದಾವಣೆಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದ ಸಿದ್ದೇಶ್ವರ ವಿರುದ್ಧ ಬಂಡಾಯ ಎದ್ದ ರೇಣುಕಾಚಾರ್ಯ ಕೂಡ 4 ಜನರ ರೆಬೆಲ್ ತಂಡದಲ್ಲಿದ್ದು ಇವರ ಮುಂದಿನ ನಡೆ ತೀವ್ರ ಕುತೂಹಲವಾಗಿದೆ. ಇನ್ನು ಮೂರನೇ ಬಾರಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೊಪ್ಪಳದ ಹಾಲಿ ಸಂಸದ ಕರಡಿ ಸಂಗಣ್ಣಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದ್ದು, ಮೂರನೇ ಬಾರಿಗೆ ಟಿಕೆಟ್ ನಿರಾಕರಿಸಿದೆ. ಇದು ಕರಡಿ ಸಂಗಣ್ಣ ಮತ್ತು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವಂತೆ ಬೆಂಬಲಿಗರ ಆಗ್ರಹಿಸಿದ್ದಾರೆ. ಈ ಹಿನ್ನಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿರುವ ಅವರು, ನಾಳೆಬೆಂಬಲಿಗರ ಸಭೆ ಕರೆದಿದ್ದು, ತೀರ್ವ ಕುತೂಹಲಕ್ಕೆ ಕಾರಣವಾಗಿದೆ.


