ಮಂಡ್ಯ : ಕಳೆದ ಬಾರಿ ಲೋಕ ಸಭಾ ಕ್ಷೇತ್ರ ಮಂಡ್ಯ ಜಿದ್ದಾ ಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಿತ್ತು ಈ ಬಾರಿನೂ ಕೂಡ ಅದೇ ಪರಿಸ್ಥಿತಿ ಇರುವ ವಾತಾವರಣ ಮೂಡುತ್ತಿದೆ. ಲೋಕ ಸಭೆ ಚುನಾವಣೆಗೆ ಇನ್ನೇನು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು.ಮತ್ತೊಮ್ಮೆ ಕಣಕ್ಕೆ ಇಳಿಯಲು ಸುಮಲತಾ ಅಂಬರೀಷ್ ಸಜ್ಜಾಗಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡ ಪರಿಣಾಮ ಜೆಡಿಎಸ್ ಮಂಡ್ಯ ಕ್ಷೇತ್ರ ಕೊಡಬೇಕೆಂದು ಪಟ್ಟು ಹಿಡಿದಿದ್ದು ಬಿಜೆಪಿ ಟಿಕೆಟ್ ಗೆ ಕಣ್ಣಿಟ್ಟಿರೋ ರೆಬಲ್ ಲೇಡಿ ಸುಮಲತಾ ನಾನು ಸ್ವರ್ಧೆ ಮಾಡೇ ಮಾಡುತ್ತೇನೆ ಎಂದು ಹೇಳುವ ಮೂಲಕ ಸವಾಲು ಒಡ್ಡಿದ್ದಾರೆ. ಸಂಸದೆ ಸುಮಲತಾ ಅವರ ನಡೆ ತೀವ್ರ ಕುತೂಹಲ ಮೂಡಿಸಿದ್ದು ಇಂದು ಪ್ರಮುಖ ಮುಖಂಡರ ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಮಂಡ್ಯ ಕ್ಷೇತ್ರ ಉಳಿಸಿಕೊಳ್ಳಬೇಕೆಂಬುದು, ಬಿಜೆಪಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗಬೇಕೆಂಬುದು ನನ್ನ ಹೋರಾಟ, ಟಿಕೆಟ್ ಘೋಷಣೆಯಾಗುವವರೆಗೂ ಅಂತೆಕಂತೆಗಳು ಕೇಳಿಬರುತ್ತಲೇ ಇರುತ್ತವೆ, ನೋಡೋಣ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು, ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ, ನಾನು ಈ ಬಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಂಡಿತ ಎಂದು ಸಂಸದೆ ಸುಮಲತಾ ಅಂಬರೀಷ್ ಪುನರುಚ್ಛರಿಸಿದ್ದಾರೆ.
ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪುತ್ರನೊಂದಿಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಇದಾದ ನಂತರ ಮಂಡ್ಯ, ಹಾಸನ, ಕೋಲಾರ ಲೋಸಸಭಾ ಕ್ಷೇತ್ರಗಳ ಟಿಕೆಟ್ ಜೆಡಿಎಸ್ ಪಾಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.ಈ ಬಗ್ಗೆ ಮಂಡ್ಯದಲ್ಲಿ ದಿಶಾ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ಜೆಡಿಎಸ್ ನಾಯಕರು ಬಿಜೆಪಿ ಹೈಕಮಾಂಡ್ ನ್ನು ಭೇಟಿ ಮಾಡಿ ತಮ್ಮ ಪರವಾಗಿ ಮಾತನಾಡಿ ತಮಗೆ ಟಿಕೆಟ್ ಸಿಗಬೇಕೆಂದು ಕೇಳುವುದು ಸಹಜ. ನನಗಂತೂ ಮಂಡ್ಯ ಕ್ಷೇತ್ರದ ಟಿಕೆಟ್ ಬಿಜೆಪಿ ಪಾಲಾಗುತ್ತದೆ ಎಂಬ ನಂಬಿಕೆಯಿದೆ. ನನಗೆ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ಕೇಳುವುದು ಕಷ್ಟವೇನಲ್ಲ, ನನ್ನ ಮುಂದೆ ಹಲವು ಆಯ್ಕೆಗಳಿವೆ, ಆದರೆ ನಾನು ಮಂಡ್ಯ ಬಿಟ್ಟು ಬೇರೆ ಕಡೆಗೆ ಹೋಗುವ ಪ್ರಶ್ನೆಯೇ ಇಲ್ಲ. ಟಿಕೆಟ್ ಘೋಷಣೆಯಾಗುವವರೆಗೂ ಹೀಗೆ ಅಂತೆಕಂತೆಗಳು ಕೇಳಿಬರುತ್ತಲೇ ಇರುತ್ತವೆ, ನೋಡೋಣ ಏನಾಗುತ್ತದೆ ಎಂದು ತಮ್ಮ ಮುಂದಿನ ನಡೆಯ ಬಗ್ಗೆ ಕುತೂಹಲ ಇರಿಸಿಕೊಂಡರು.
ನಾಳೆ ಸಂಜೆ 4 ಗಂಟೆಗೆ ಬೆಂಗಳೂರು ನಿವಾಸದಲ್ಲಿ ಪ್ರಮುಖ ಮುಖಂಡರ ಜೊತೆ ಸುಮಲತಾ ಅವರು ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ . ಸುಮಲತಾ ಅವರು ಮಂಡ್ಯದಿಂದ ಸ್ಪರ್ಧೆ ಖಚಿತ ಪಡಿಸಿದ ಬೆನ್ನಲ್ಲೆ ಮಹತ್ವದ ಸಭೆ ಕರೆದಿದ್ದು ಸುಮಲತಾರ ಪ್ರಮುಖ ಬೆಂಬಲಿಗರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಕೆಲ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಕೂಡ ಸಭೆಯಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಚುನಾವಣೆಗೆ ಸಿದ್ದತೆ ಕುರಿತು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಟಿಕೆಟ್ ತಪ್ಪಿದ್ರೆ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತೆ.ನನ್ನ ಹೋರಾಟ ಮಂಡ್ಯಕೋಸ್ಕರ. ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ. ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗ್ತಿತ್ತು. ಜೆಡಿಎಸ್ ನಾಯಕರು ಏನಾದರೂ ಹೇಳಬಹುದು,ಆದರೆ ಅಧಿಕೃತವಾಗಬೇಕು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತ ಅಲ್ಲ ಎಂದಿದ್ದಾರೆ.


