ತುಮಕೂರು : ಭಾರತೀಯ ಕ್ರಿಕೆಟ್ ಆಟಗಾರ, ಕನ್ನಡಿಗ ಕೆ.ಎಲ್.ರಾಹುಲ್ ಕುಟುಂಬ ಸಮೇತರಾಗಿ ನಿನ್ನೆ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ತಂದೆ ಲೋಕೇಶ್, ತಾಯಿ ಲೋಕೇಶ್ವರಿ ಅವರೊಂದಿಗೆ ರಾಹುಲ್ ಮಠಕ್ಕೆ ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಮಠದ ಸಾವಿರಾರು ಮಕ್ಕಳು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಅವರನ್ನು ನೋಡಲು ಮುಗಿ ಬಿದ್ದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ರಾಹುಲ್ ತಂದೆ ಲೋಕೇಶ್ ಅವರು ತುಮಕೂರಿಗೆ ಸಮೀಪವಿರುವ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕಣ್ಣೂರು ಮೂಲದವರಾಗಿದ್ದು, ಸಿದ್ಧಗಂಗಾ ಮಠದ ಭಕ್ತರಾಗಿದ್ದಾರೆ. ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಪೂರ್ವಾಶ್ರಮದ ಊರು ಕೂಡ ರಾಮನಗರ ಜಿಲ್ಲೆಯೇ ಆಗಿದ್ದು, ಈ ಬಗ್ಗೆ ಲೋಕಾಭಿರಾಮವಾಗಿ ಪರಸ್ಪರ ಚರ್ಚಿಸಿದರು.
ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ರಾಹುಲ್ ಪ್ರತಿಭೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಕ್ರಿಕೆಟ್ನಲ್ಲಿ ಮತ್ತಷ್ಟು ಯಶಸ್ಸು ಕಂಡು ಉತ್ತಂಗಕ್ಕೇರಲಿ ಎಂದು ಆಶೀರ್ವದಿಸಿದ್ದಾರೆ.


