ಮಂಗಳೂರು : ಫೆಬ್ರವರಿ 25 ರಿಂದ ತೊಕ್ಕೊಟ್ಟಿನಲ್ಲಿ ಡಿವೈಎಫ್‌ಐ ಸಮಾವೇಶ ನಡೆಯಲಿದ್ದು ಈ ಪ್ರಯುಕ್ತ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಕೆ ಮಾಡಿದ್ದಾರೆ .ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕರು ಹರೇಕಳ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ DYFI ಘಟಕದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದ್ದು, ಅದರ ಅಂಗವಾಗಿ ಕಚೇರಿ ಬಳಿ ಹಾಕಿರುವ ಟಿಪ್ಪು ಸುಲ್ತಾನ್ ಅವರ ಕಟೌಟ್ ತೆಗೆಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಡಿವೈಎಫ್ಐ(DYFI) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದು, ನಾವು ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿದ್ದೇವೆ. ಪೊಲೀಸರು ನೀವು ಅನುಮತಿ ಪಡೆದಿಲ್ಲ ಎಂದು ಹೇಳುವ ಜೊತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತೆ ಎಂದು ಹೇಳಿದ್ದಾರೆ. ಇಲ್ಲಿ ಅನುಮತಿಯ ಪ್ರಶ್ನೆ ಅಲ್ಲ. ಟಿಪ್ಪು ಫೋಟೋ ಹಾಕಿದ್ದನ್ನು ಬಿಜೆಪಿ ವಿವಾದ ಮಾಡುತ್ತಿದೆ. ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಯತ್ನಿಸುತ್ತಿದೆ. ಅದಕ್ಕೆ ಹೆದರಿದ ಪೊಲೀಸ್ ಇಲಾಖೆ ನಮಗೆ ನೋಟಿಸ್ ನೀಡಿದೆ ಎಂದು ಹೇಳಿದ್ದಾರೆ.
ನಾವು ಯಾವುದೇ ಕಾರಣಕ್ಕೂ ತೆರವುಗೊಳಿಸುವ ಪ್ರಶ್ನೆಯಿಲ್ಲ. ಈಗಾಗಲೇ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿದ್ದೇವೆ. ಟಿಪ್ಪು ಯಾವುದೇ ಕಾರಣಕ್ಕೂ ನಿಷೇಧಿತ, ವಿವಾದಾತ್ಮಕ ವ್ಯಕ್ತಿ ಅಲ್ಲ. ಬಿಜೆಪಿಗೆ ಟಿಪ್ಪು ಸುಲ್ತಾನ್ ಇಷ್ಟ ಇಲ್ಲ ಅಂದ್ರೆ ನಾವು ತೆರವುಗೊಳಿಸುವ ಪ್ರಶ್ನೆಯಿಲ್ಲ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹ ಟಿಪ್ಪು ಸುಲ್ತಾನ್ ಆಳ್ವಿಕೆ ಮಾಡಿದ್ದಾರೆ. ಈ ನೆಲದಲ್ಲಿ ನಿಂತು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ್ದಾರೆ.ರಾಣಿ ಅಬ್ಬಕ್ಕ ಹಾಗೂ ಟಿಪ್ಪು ಸುಲ್ತಾನ್ ಗೆ ನಾವು ಬಹಳಷ್ಟು ಗೌರವ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ತೊಕ್ಕೊಟ್ಟಿನಲ್ಲಿ ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನ ನಡೆಯಲಿದೆ. ಹೀಗಾಗಿ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಫೆ.16 ರಂದು ಡಿವೈಎಫ್ಐ ಆರು ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ ಎಂದು ವಿವರಣೆ ನೀಡಿದರು.


