ಮಂಗಳೂರು : ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀರಾಮನಿಗೆ ಅವಹೇಳನ ಮಾಡಿದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ಮೊದಲಿಗೆ ತಪ್ಪೊಪ್ಪಿಕೊಂಡ ಶಿಕ್ಷಣ ಸಂಸ್ಥೆ ಉಲ್ಟಾ ಒಡೆದಿದ್ದು ಆಡಳಿತಾರೂಢ ಕಾಂಗ್ರೆಸ್ ಸರಕಾರ ಸಹಕಾರ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.
ಸೇಂಟ್ ಜೆರೋಸಾ ಶಾಲೆಯ ಘಟನೆ ದುರದೃಷ್ಟಕರ ಎಂದಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಕುರಿತು ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಶನಿವಾರ ತಿಳಿಸಿದ್ದಾರೆ.
ಜೆರೋಸಾ ಶಾಲೆ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ಆರೋಪ ಸಂಬಂಧ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಆಕಾಶ್ ಕೆ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ನಮ್ಮ ಅಭಿಪ್ರಾಯ, ಅವರ ಅಭಿಪ್ರಾಯ ಏನೇ ಇರಲಿ, ಕಾನೂನು ಮತ್ತು ಸಂವಿಧಾನ ಮುಖ್ಯ ಎಂದು ಹೇಳಿದ ಅವರು ಶಾಸಕರು ಮತ್ತು ಇತರರ ನಡವಳಿಕೆಯಿಂದ ನಮಗೆ ಬಹಳಷ್ಟು ನೋವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಶೀಘ್ರದಲ್ಲೇ ಸತ್ಯಾಂಶ ತಿಳಿಯುತ್ತದೆ. ತುರ್ತಾಗಿ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಧಾರ್ಮಿಕವಾಗಿ ಸಮಾಜವನ್ನು ಇಬ್ಬಾಗ ಮಾಡಲು ಹೋಗಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ ಅವರು ಕೂಲಂಕೂಷ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.


