ಪುತ್ತೂರು : ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ದಿನೇಶ್ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಅವರ ಗಡಿಪಾರು ನೊಟೀಸ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಘಟನೆ ವರದಿಯಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55 ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್ ಜಾರಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿರುವ ಉಪವಿಭಾಗೀಯ ದಂಡಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ದಿನೇಶ್ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.ಹಾಗೆ ನೀವು ಸತ್ವಃ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ಈ ಕುರಿತು ವಾದಿಸಬಹುದು ಎಂದು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್ ಪತ್ರದಲ್ಲಿ ತಿಳಿಸಿದ್ದರು.ಸರಕಾರ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ಕೂಡ ನಡೆದಿತ್ತು.
ಅರ್ಜಿದಾರರ ಪರವಾದ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಗಡಿಪಾರು ನೊಟೀಸ್ಗೆ ತಡೆಯಾಜ್ಞೆ ನೀಡಿದ್ದಾರೆ. ಅರ್ಜಿದಾರರ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿ, ನೋಟಿಸ್ ಜಾರಿ ಮಾಡಿದ್ದು ಸರಿಯಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದಿದ್ದಾರೆ . ಹಾಗೆ ಆಪಾದಿತರ ವಿರುದ್ಧದ ಎಲ್ಲ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರವೀಶ್ ಕುಮಾರ್ ನಾಯರ್ ಎಂಬಾತನಿಗೆ ಹಾಗೂ ಎಂಟು ಮಂದಿ ಪುತ್ತೂರು ಬರಂಗದಳ ಕಾರ್ಯಕರ್ತರಿಗೆ ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.


