ಹೊಸದಿಲ್ಲಿ: ರಾಜಕೀಯ ಅಂದರೆ ಇಷ್ಟು ಏನೆಲ್ಲಾ ಕಸರತ್ತು ನಡೆಯುತ್ತೆ ಎಂಬುದು ಗೊತ್ತಾಗಲ್ಲ.ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಣೆಯಿಂದ ಬೇಸತ್ತು ಬಿಜೆಪಿ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಪಕ್ಷಕ್ಕೆ ವಾಪಸ್ ಕರೆ ತರುವ ಪ್ರಯತ್ನಗಳು ಆರಂಭವಾಗಿವೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರು ಶೆಟ್ಟರ್ ಜತೆಗೆ ಮಾತುಕತೆ ನಡೆಸಿದ್ದಾರೆ ಎಂಬ ವರ್ತಮಾನಗಳಿದ್ದು,ಸವದಿ ಕೂಡ ಫಡ್ನವೀಸ್ ಮೂಲಕವೇ ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೂ ಶೆಟ್ಟರ್ ಜತೆ ಈಗಾಗಲೇ ಎರಡು ಬಾರಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಶೆಟ್ಟರ್ ಭೇಟಿ ಮಾಡಿದ ಬಳಿಕ ಈ ಎಲ್ಲ ಬೆಳವಣಿಗೆ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಮಧ್ಯೆ ಮಂಗಳವಾರ ರಾತ್ರಿ ಮಾಜಿ ಸಿಎಂ ಶೆಟ್ಟರ್ ಅವರು ತಮ್ಮ ಆಪ್ತ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರೊಂದಿಗೆ ದೆಹಲಿಗೆ ಬಂದಿಳಿದಿರುವುದು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ದೆಹಲಿಯಲ್ಲಿರುವುದು ಈ ಬೆಳವಣಿಗೆ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಶೆಟ್ಟರ್ ಬೆಳವಣಿಗೆ ಅಲ್ಲಗಳೆದು, `ರಾಜ್ಯ ಬಿಜೆಪಿಯ ಹಲವಾರು ನಾಯಕರು ನನ್ನ ಜೊತೆ ವಾಪಸ್ ಪಕ್ಷಕ್ಕೆ ಬರುವಂತೆ ಕೋರಿದ್ದಾರೆ.ರಾಷ್ಟ್ರೀಯ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಆ ಬಗ್ಗೆ ನಾನು ಯೋಚನೆ ಮಾಡಿಲ್ಲ’ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು
ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಬಗೆಗೆ ಪಕ್ಷದ ರಾಷ್ಟಿçÃಯ ವರಿಷ್ಠರು ಚರ್ಚೆಗೆ ಮುಂದಾಗಿದ್ದಾರೆ ಎAಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಸಾಧ್ಯಾಸಾಧ್ಯತೆಗಳ ಬಗೆಗೆ ಚರ್ಚೆ ನಡೆಯುವುದು ಸಾಮಾನ್ಯವಾದರೂ ಸದ್ಯ ಕಾಂಗ್ರೆಸ್ನಲ್ಲಿರುವ ಮಾಜಿ ಸಿಎಂ ಶೆಟ್ಟರ್ ಹೆಸರು ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಕುತೂಹಲ ಹೆಚ್ಚಿಸಿದೆ.
ದೆಹಲಿಯಲ್ಲಿ ರಾಜ್ಯ ನಾಯಕರು ಕುತೂಹಲಕರ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿಯ ಬಹುತೇಕ ಪ್ರಮುಖ ನಾಯಕರು ಹಠಾತ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಮಧ್ಯರಾತ್ರಿ ದೆಹಲಿ ವಿಮಾನ ಏರಿದ್ದರೆ, ಅದಕ್ಕೆ ತುಸು ಹೊತ್ತು ಮುಂಚೆ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತಮ್ಮ ಬೆಂಬಲಿಗ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದಾದ ಬಳಿಕ ಬುಧವಾರ ಬೆಳಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದಾರೆ. ತೇಜಸ್ವಿ ಸೂರ್ಯ ಬದಲಾಗಿ ಕೇಂದ್ರ ಸಚಿವ ಎಸ್.ಜೈಶಂಕರ್ ಅವರನ್ನು ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಸುವ ಚರ್ಚೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಇದಾದ ಕೆಲವೇ ಗಂಟೆಗಳಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಕೂಡ ಪ್ರತ್ಯೇಕವಾಗಿ ರಾಷ್ಟç ರಾಜಧಾನಿಗೆ ತೆರಳಿದ್ದಾರೆ. ಈ ಎಲ್ಲ ನಾಯಕರ ದೆಹಲಿ ಭೇಟಿಯ ಹಿಂದೆ ಹಲವಾರು ಲೆಕ್ಕಾಚಾರಗಳು ಕೇಳಿಬರುತ್ತಿದೆ.


