ಕಂಪ್ಲಿ : ಒಂದೇ ಸೂರಿನಡಿ ಎಲ್ಲಾ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಜರುತ್ತಿರುವ ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಗ್ರಹಣವಿಡಿದಿದ್ದು, ಕಟ್ಟಡದ ಆವರಣವಂತೂ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆಯಲ್ಲದೇ, ಕಾಮಗಾರಿ ಪೂರ್ಣಗೊಳ್ಳುವುದಾದರೂ ಯಾವಾಗ ಎಂಬ ಯಕ್ಷ ಪ್ರಶ್ನೆ ಕಂಪ್ಲಿಯ ಜನತೆಯಲ್ಲಿ ಉಲ್ಬಣಗೊಂಡಿದೆ.
ಹೌದು ಇಲ್ಲಿನ ಹೊಸಪೇಟೆ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಸುಮಾರು 10 ಕೋಟಿ ರೂ ವೆಚ್ಚದ ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿಗೆ 2021 ಜುಲೈ.10 ರಂದು ಶಾಸಕ ಜೆ.ಎನ್.ಗಣೇಶ್ ವಿದ್ಯುಕ್ತ ಚಾಲನೆ ನೀಡಿ, ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸೇವೆಗಳನ್ನು ಜನತೆಗೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಈವರೆಗೂ ಒಟ್ಟಾರೆ 7 ಕೋಟಿ ಅನುದಾನ ಬಿಡಿಗಡೆಗೊಂಡಿದ್ದು, ಇನ್ನು 3 ಕೋಟಿ ಅನುದಾನ ಬಿಡುಗಡೆಗೊಳ್ಳುವುದು ಬಾಕಿ ಇದೆ. ಈಗಾಗಲೇ ಕಟ್ಟಡದ ನಿರ್ಮಾಣ ಕಾಮಗಾರಿಗೆ 90% ಪೂರ್ಣಗೊಂಡಿದ್ದು ಇನ್ನು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ.
ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟ ಮಿನಿವಿಧಾನಸೌಧ ಕಟ್ಟಡದ ಆವರಣ :
ಕಿಡಗೇಡಿಗಳ ಉಪಟಳದಿಂದಾಗಿ ಮಿನಿವಿಧಾನಸೌಧ ಕಟ್ಟಡದಲ್ಲಿನ ಕೆಲ ಕಿಟಕಿಯ ಗಾಜುಗಳು ಹಾಗೂ ಕಟ್ಟಡದ ಮುಂಭಾಗದ ಟೈಲ್ಸ್ (ಗ್ರಾನೈಟ್ಸ್) ಹೊಡೆದು ಹೋಗಿವೆ. ಇದಷ್ಟೇ ಅಲ್ಲದೇ ಮಿನಿವಿಧಾನಸೌದ ಕಟ್ಟಡದ ಆವರಣವಂತೂ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಒಳಗಡೆ ಹಾಗೂ ಕಟ್ಟಡದ ಮುಂಬಾಗದಲ್ಲೆಲ್ಲಾ ಮದ್ಯದ ಬಾಟೆಲ್ ಗಳ ವಡೆದ ಗಾಜಿನ ಚೂರುಗಳು, ಮದ್ಯದ ಪಾಕೀಟ್, ಗುಟ್ಕಾ ಹಾಗೂ ಸಿಗರೇಟ್ ನ ತುಂಡುಗಳದ್ದೇ ರಾಶಿ ಗೋಚರಿಸುತ್ತದೆ.
ತಾಲೂಕು ಮಟ್ಟದ ಕಚೇರಿಗಳ ನಿರೀಕ್ಷೆಯಲ್ಲಿ ಜನತೆ :
ಕಂಪ್ಲಿ ತಾಲೂಕು ಘೋಷಣೆಯಾಗಿ 5 ವರ್ಷ ಕಳೆದರೂ ಈವರೆಗೆ ಬೆರಳೆಣಿಕೆಯಷ್ಟು ಮಾತ್ರ ತಾಲೂಕು ಮಟ್ಟದ ಕಚೇರಿಗಳು ಆರಂಭಗೊಂಡಿವೆಯಷ್ಟೇ, ಅಲ್ಲದೇ ಅವಶ್ಯಕವಾಗಿ ಬೇಕಾಗುವಂತಹ ಕ್ಷೇತ್ರಶಿಕ್ಷಣಾಧಿಕಾರಿ, ಕೃಷಿ, ತೋಟಗಾರಿಕೆ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಇನ್ನು ಅನೇಕ ಇಲಾಖೆಗಳ ಕಚೇರಿಗಳು ಆರಂಭಗೊಂಡಿಲ್ಲ. ಮಿನಿವಿಧಾನಸೌಧ ಪೂರ್ಣಗೊಂಡರೆ ಕ್ರಮೇಣ ಎಲ್ಲಾ ಇಲಾಖೆಯ ಕಚೇರಿಗಳು ಆರಂಭವಾಗಲಿವೆ ಎಂದು ಕಂಪ್ಲಿ ತಾಲೂಕಿನ ಜನತೆ ನಿರೀಕ್ಷೆಯಲ್ಲಿದ್ದರು. ಆದರೆ ಸರ್ಕಾರ, ಶಾಸಕರು, ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟಂತಹ ಅಧಿಕಾರಿಗಳ ನಿರ್ಲಕ್ಷ್ಯೆ ಜನತೆಯ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಅಲ್ಲದೇ ತಾಲೂಕಿನ ಜನತೆಗೆ ಹೊಸಪೇಟೆಗೆ ಅಲೆದಾಡುವ ಪರಿಸ್ಥಿತಿ ಈಗಲೂ ನಿಂತಿಲ್ಲ. ಈವರೆಗೂ ಅವಶ್ಯಕವಿರುವಂತಹ ಕಚೇರಿಗಳ ಆರಂಭಕ್ಕೆ ಮುಂದಾಗದ ಸರ್ಕಾರದ ವಿರುದ್ಧ ತಾಲೂಕಿನ ಜನತೆ ಹಿಡಿಶಾಪವಾಕುತ್ತಿದ್ದಾರೆ.
ಶಾಸಕ ಜೆ.ಎನ್.ಗಣೇಶ್ ಹಾಗೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯೆ ಆರೋಪ :
ಶಾಸಕ ಜೆ.ಎನ್.ಗಣೇಶ್ ಹಾಗೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯೆಯಿಂದಾಗಿ ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿ ಆರಂಭಗೊಂಡು 2 ವರ್ಷಕಳೆದರೂ ಪೂರ್ಣಗೊಳ್ಳಂಡಿಲ್ಲ. ಅಲ್ಲದೇ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳು ಗತಿಸಿದರು ಕ್ಷೇತ್ರದ ಅಭಿವೃದ್ಧಿಗೆ ಈವರೆಗೂ ಒಂದು ರೂಪಾಯಿಯೂ ಸಹ ಅನುದಾನ ಬಿಡುಗಡೆಗೊಂಡಿಲ್ಲ. ಹೀಗೆ ಮುಂದುವರೆದರೇ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ನೂತನ ತಾಲೂಕುಗಳ ಪಾಡೇನು ಎನ್ನುವುದು ವಿರೋಧ ಪಕ್ಷಗಳ ನಾಯಕರು ಹಾಗೂ ಸಾರ್ವಜನಿಕರ ಪ್ರಶ್ನೆಯಾಗಿದೆ.
ಈಗಲಾದರೂ ಶಾಸಕರು, ಸರ್ಕಾರ ಹಾಗೂ ಸಂಬಂಧ ಪಟ್ಟಂತಹ ಅಧಿಕಾರಿಗಳು ಎಚ್ಚೆತ್ತುಕೊಂಡು ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ತಾಲೂಕು ಮಟ್ಟದ ಕಚೇರಿಗಳನ್ನು ಆರಂಭಿಸುವ ಮೂಲಕ ತಾಲೂಕಿನ ಜನತೆಗೆ ಅನುಕೂಲತೆ ಕಲ್ಪಿಸಲು ಮುಂದಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


