ಬೆಂಗಳೂರು: ಅನುಕಂಪದ ಆಧಾರದ ಮೇಲೆ ಬೆಸ್ಕಾಂನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಸೂಪರಿಂಟೆಂಡಿಂಗ್ ಎಂಜಿನಿಯರ್ ಸೇರಿದಂತೆ ಎಂಟು ಮಂದಿಯನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ವಲಯದ ಬೆಸ್ಕಾಂ ಸೂಪರಿಂಟೆಂಡಿಂಗ್ ಎಂಜಿನಿಯರ್ ಎಸ್ ಟಿ ಶಾಂತಮಲ್ಲಪ್ಪ, ಸಹಾಯಕ ಅಧಿಕಾರಿ ಎಲ್ ರವಿ, ಕಚೇರಿ ಸಹಾಯಕ ಎಚ್ ಸಿ ಪ್ರೇಮ್ ಕುಮಾರ್, ಉದ್ಯೋಗಾಕಾಂಕ್ಷಿ ಸಿ ಕೆ ಫೈಜಾನ್ ಮುಜಾಹಿದ್, ವಿ ವೀರೇಶ್, ಸಿ ರಘುಕಿರಣ್, ಹರೀಶ್, ಎಂ ಆರ್ ಶಿವಪ್ರಸಾದ್ ಶಂಕಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ
ಪ್ರತಿ ಅಭ್ಯರ್ಥಿಯಿಂದ 35 ಲಕ್ಷದಿಂದ 40 ಲಕ್ಷ ರೂಪಾಯಿ ವಸೂಲಿ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮುಜಾಹಿದ್ ಅವರು ಅನುಕಂಪದ ಆಧಾರದ ಮೇಲೆ ಕೆಲಸ ಕೋರಿ ಬೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ಬೆಸ್ಕಾಂ ಸಿಬ್ಬಂದಿಯಾಗಿದ್ದ ತಮ್ಮ ಸಹೋದರ ಸಿ ಕೆ ಮೊಹಮ್ಮದ್ ಶೇಖ್ ಅವರು ಕರ್ತವ್ಯದಲ್ಲಿರುವಾಗ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾರೆ ಎಂಬ ದಾಖಲೆಯನ್ನು ಅವರು ಲಗತ್ತಿಸಿದ್ದರು.
ಸಿ ಕೆ ಮೊಹಮ್ಮದ್ ಶೇಖ್ ಎಂಬ ವ್ಯಕ್ತಿ ಜಿಲ್ಲೆಯಲ್ಲಿ ಎಂದಿಗೂ ಸೇವೆ ಸಲ್ಲಿಸಿಲ್ಲ ಎಂಬುದು ದಾಖಲೆಗಳ ಪರಿಶೀಲನೆಯಿಂದ ತಿಳಿದುಬಂದಿದೆ. ಪೊಲೀಸರು ಸಿ ಕೆ ಮೊಹಮ್ಮದ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಬೆಸ್ಕಾಂನಲ್ಲಿ ಆರು ಮಂದಿಗೆ ಕೆಲಸ ಸಿಕ್ಕಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ…