ದೇಶದ ಬೃಹತ್ ಕಂಪನಿ ಕುಡಿಯುವ ನೀರನ್ನು ಮಾರಾಟ ಮಾಡುವ ‘ಬಿಸ್ಲೆರಿ’ಯನ್ನು ರಮೇಶ್ ಚೌಹಾಣ್ ಟಾಟಾ ಸಮೂಹಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಆದರೆ, 82ರ ಇಳಿ ವಯಸ್ಸಿನಲ್ಲಿರುವ ಚೌಹಾಣ್‌ಗೆ ಈ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದೇ ತೋಚುತ್ತಿಲ್ಲವಂತೆ. ಸ್ವತಃ ಅವರೇ ಇಂಥಹದ್ದೊಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಿಸ್ಲೆರಿ ಮೂಲತಃ ಇಟಾಲಿಯನ್ ಕಂಪನಿ ಇಂಥಹದ್ದೊಂದು ಐಕಾನಿಕ್ ಕಂಪನಿ ಭಾರತ ಮೂಲದ್ದಲ್ಲ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಈ ಬ್ರ್ಯಾಂಡ್‌ನ್ನು ಹುಟ್ಟುಹಾಕಿದವರು ಫೆಲಿಸ್ ಬಿಸ್ಲೆರಿ ಎಂಬ ಇಟಲಿ ಪ್ರಜೆ. 1965ರಲ್ಲಿ ಇಟಲಿ ವೈದ್ಯ ಸೆಸರಿ ರೊಸ್ಸಿ ಹಾಗೂ ಭಾರತೀಯ ಉದ್ಯಮಿ ಕುಶ್ರೂ ಶನ್‌ಟುಕ್ ಸೇರಿಕೊಂಡು ಮುಂಬೈನಿಂದ ಇದರ ಯಾತ್ರೆ ಶುರು ಮಾಡಿದರು.
ಅಮೆರಿಕದ ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದು 22ನೇ ವಯಸ್ಸಿಗೆ ಭಾರತಕ್ಕೆ ಬಂದಿದ್ದ ಚೌಹಣ್ ಈ ಬಿಸ್ಲೆರಿಯನ್ನು ಕೈಗೆತ್ತಿಕೊಂಡು ಬಹಳ ಆಸಕ್ತಿಯಿಂದ ಪೋಷಿಸಿ ಬೆಳೆಸಿದರು. ಕುಡಿಯುವ ನೀರು, ಮಿನರಲ್ ವಾಟರ್, ಪ್ಯಾಕೆಜ್‌ಡ್ ವಾಟರ್‌ಗೆ ‘ಬಿಸ್ಲೆರಿ’ಯನ್ನು ಅನ್ವರ್ಥ ನಾಮ ಎಂಬಂತೆ ಕಟ್ಟಿ ನಿಲ್ಲಿಸಿದರು.
ಪರಿಣಾಮ, ವಿದೇಶಿ ದೈತ್ಯ ಕಂಪನಿಗಳಿಂದ ಹಿಡಿದು ದೇಶದ ಬೃಹತ್ ಸಮೂಹಗಳೂ ಬಿಸ್ಲೆರಿ ಎಂಬ ಮೀನಿಗಾಗಿ ಬಲೆ ಬೀಸಲಾರಂಭಿಸಿದ್ದವು. 2002-03ರಲ್ಲಿ ಬಹುರಾಷ್ಟ್ರೀಯ ದೈತ್ಯರಾದ ನೆಸ್ಲೆ ಮತ್ತು ಡ್ಯಾನೋನ್ ಬಿಸ್ಲೆರಿಯಲ್ಲಿ ಕನಿಷ್ಠ ಷೇರನ್ನಾದರೂ ಪಡೆದುಕೊಳ್ಳಬೇಕು ಎಂದು ಚೌಹಾಣ್‌ರನ್ನು ಒಲಿಸಿಕೊಳ್ಳಲು ಯತ್ನಿಸಿದವು.