ಬೆಂಗಳೂರು: ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಹೆಚ್.ವಿಶ್ವನಾಥ್ರವರಿಗೆ 15 ಕೋಟಿ ರೂಪಾಯಿ ನೀಡಿರುವುದನ್ನು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡಿರುವ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯು ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿತು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ರವರಿಗೆ 15 ಕೋಟಿ ರೂಪಾಯಿ ಹಣ ನೀಡಿರುವುದು ಹಾಗೂ ಅದರಲ್ಲಿ ವಿಶ್ವನಾಥ್ರವರು 4ರಿಂದ 5 ಕೋಟಿ ರೂಪಾಯಿಯನ್ನು ಖರ್ಚು ಮಾಡಿರುವ ಗಂಭೀರ ವಿಚಾರವನ್ನು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬಹಿರಂಗಪಡಿಸಿದ್ದಾರೆ ಎಂದರು.
ವಿ.ಶ್ರೀನಿವಾಸ್ ಪ್ರಸಾದ್ ಕೂಡ ಚುನಾವಣೆಗೆ ಹಣ ಪಡೆದಿದ್ದಾರೆ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ. ಈ 15 ಕೋಟಿ ರೂಪಾಯಿಯನ್ನು ಬಿಜೆಪಿ ಹೇಗೆ ಸಂಪಾದಿಸಿತು? ಅಭ್ಯರ್ಥಿ ಹೆಚ್.ವಿಶ್ವನಾಥ್ರವರಿಗೆ ಯಾಕಾಗಿ ವರ್ಗಾಯಿಸಲಾಯಿತು? ವಿಶ್ವನಾಥ್ 4 ಅಥವಾ 5 ಕೋಟಿ ರೂಪಾಯಿಯನ್ನು ಹೇಗೆ ಖರ್ಚು ಮಾಡಿದರು? ಉಳಿದ 10 ಕೋಟಿ ರೂಪಾಯಿ ಈಗ ಎಲ್ಲಿದೆ? ಚುನಾವಣಾ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಆದ್ದರಿಂದ ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯವು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದೊಂದು ಬಹುದೊಡ್ಡ ಚುನಾವಣಾ ಅಕ್ರಮ. 2019ರಲ್ಲಿದ್ದ ಚುನಾವಣಾ ಆಯೋಗದ ನೀತಿ ಸಂಹಿತೆ ಪ್ರಕಾರ ಅಭ್ಯರ್ಥಿಯು 28 ಲಕ್ಷ ರೂಪಾಯಿಯನ್ನು ಮಾತ್ರ ಖರ್ಚು ಮಾಡಲು ಅವಕಾಶ ಇರುತ್ತದೆ. ಬಿಜೆಪಿ ಸಂಸದರೇ ಬಹಿರಂಗವಾಗಿ ಒಪ್ಪಿಕೊಂಡಿರುವಂತೆ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ 4ರಿಂದ 5 ಕೋಟಿ ರೂಪಾಯಿ ಖರ್ಚು ಮಾಡಿರುವುದು ಗರಿಷ್ಠ ಮಿತಿಗಿಂತ ಬರೋಬ್ಬರಿ 15 ಪಟ್ಟಿಗೂ ಹೆಚ್ಚು ಖರ್ಚು ಮಾಡಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ವಿ ಸದಂ ಹೇಳಿದರು.


