ಸುರತ್ಕಲ್ : ಫ್ಲ್ಯಾಟ್ ನಿರ್ಮಿಸಿಕೊಡುವುದಾಗಿ ಗ್ರಾಹಕರಿಂದ ಪೂರ್ತಿ ಹಣವನ್ನು ಪಡೆದ ಮಹಿಳೆಯೊಬ್ಬರು ಫ್ಲ್ಯಾಟ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಗ್ರಾಹಕರನ್ನು ಯಾಮಾರಿಸುತ್ತಿರುವ ಘಟನೆ ಇಲ್ಲಿನ ಕೃಷ್ಣಾಪುರ ಏಳನೇ ಬ್ಲಾಕ್ ನಲ್ಲಿ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡ ಗ್ರಾಹಕರು ಹಣ ಕೇಳಿದಾಗ ಅವರ ವಿರುದ್ಧವೇ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿರುವ ಮಹಿಳೆಯ ವಿರುದ್ಧ ಗೃಹಸಚಿವರಿಗೆ ದೂರು ನೀಡಲು ಮುಂದಾಗಿದ್ದಲ್ಲದೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಕೃಷ್ಣಾಪುರ ಏಳನೇ ಬ್ಲಾಕ್ ನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಮಸೀದಿ ಪಕ್ಕದಲ್ಲೇ ಅರ್ಧಕ್ಕೆ ಬಾಕಿಯಾಗಿರುವ ಫ್ಲ್ಯಾಟ್ ಇದ್ದು ಇದರ ಗ್ರಾಹಕರು ಮಾಲಕಿಯಾಗಿರುವ ಶಜೀನಾ ಶೆಹಜಹಾನ್ ಅವರಲ್ಲಿ ಎಷ್ಟು ಬಾರಿ ಕೇಳಿಕೊಂಡರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಒಂದೊಂದು ಫ್ಲ್ಯಾಟ್ ಗೆ 35 ಲಕ್ಷ ರೂ. ಫುಲ್ ಪೇಮೆಂಟ್ ಪಡೆದಿದ್ದು ಆದರೆ ಫ್ಲ್ಯಾಟ್ ಫಿನಿಷ್ ಮಾಡದೆ ಗ್ರಾಹಕರನ್ನು ಸತಾಯಿಸುತ್ತಿರುವ ಕಾರಣ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಶಜೀನಾ ಇದೇ ರೀತಿ ಹಲವು ಕಡೆಗಳಲ್ಲಿ ಗ್ರಾಹಕರಿಗೆ ವಂಚನೆ ಮಾಡಿರುವ ಮಾಹಿತಿ ಲಭಿಸಿದೆ. ಫ್ಲ್ಯಾಟ್ ನೀಡುವುದಾಗಿ ಕಾಮಗಾರಿ ಆರಂಭಿಸಿ ಪ್ರಾರಂಭದಲ್ಲೇ ಪೂರ್ತಿ ಹಣ ಪಡೆದು ಅದನ್ನು ಶೇ 10ರಂತೆ ಹೊರಗಡೆ ಬಡ್ಡಿ ವ್ಯವಹಾರದಲ್ಲಿ ತೊಡಗಿಸುವ ಆರೋಪ ಕೂಡಾ ಕೇಳಿಬಂದಿದೆ. ಹಣ ವಾಪಾಸ್ ಕೇಳಿದರೆ ಪೊಲೀಸ್ ದೂರು ನೀಡುವ ಈಕೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು ನೊಂದ ಗ್ರಾಹಕರು ಮನವಿ ಮಾಡಿದ್ದಾರೆ.
ಸದ್ಯ ಈಕೆಯ ವಿರುದ್ಧ ಒಂದಾಗಿರುವ ಹಣ ಕಳೆದುಕೊಂಡವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.