ಸಿಡ್ನಿ : ಆಸ್ಟ್ರೇಲಿಯದ ಸಿಡ್ನಿಯಲ್ಲಿರವಿವಾರಗುಂಡಿನ ದಾಳಿ ನಡೆಸಿ 16 ಮಂದಿಯ ಪ್ರಾಣ ಹಾನಿಗೆ ಕಾರಣರಾದ ಇಬ್ಬರು ದುರುಳರು ಪಾಕ್ ಮೂಲದ ತಂದೆ- ಮಗ ಎಂದು ಆಸ್ಟ್ರೇಲಿಯದ ಮಾಧ್ಯಮಗಳು ವರದಿ ಮಾಡಿವೆ. ಪಾಕ್ ಮೂಲದ ಸಾಜಿದ್ ಅಕ್ರಮ್ (50) ಹಾಗೂ ಆತನ ಮಗ ನವೀದ್ ಅಕ್ರಮ್ (24) ಈ ದುಷ್ಕೃತ್ಯವೆಸಗಿದ್ದು, ತಂದೆ ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದರೆ, ನವೀದ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಿಡ್ನಿಯಲ್ಲಿಯೇ ನೆಲೆಸಿದ್ದ ಸಾಜಿದ್ ಅಕ್ರಮ್ ಪಾಕ್ ಮೂಲದವನು ಎಂದು ತನಿಖಾಧಿಕಾರಿಗಳ ಹೇಳಿಕೆ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ನವೀದ್ ಅಕ್ರಮ್ ಸೌಥ್ ವೇಲ್‌ನಲ್ಲಿ ಪಡೆದಿರುವ ವಾಹನ ಚಾಲನೆ ಪರವಾನಿಗೆಯ ಫೋಟೋ ಹರಿದಾಡಿದ್ದು, ಅದರಲ್ಲಿ ನವೀದ್ ಧರಿಸಿರುವ ಹಸಿರು ಟಿ-ಶರ್ಟ್ ಪಾಕಿಸ್ಥಾನದ ಕ್ರಿಕೆಟ್ ಜೆರ್ಸಿ ಎಂದು ಚರ್ಚಿಸಲಾಗುತ್ತಿದೆ.
1998ರಿಂದಲೂ ಸಿಡ್ನಿಯಲ್ಲಿದ್ದ ಅಕ್ರಮ್ ಮಗ ನವೀದ್ ಅಕ್ರಮ್ ಆಸ್ಟ್ರೇಲಿಯಾದಲ್ಲಿ ಹುಟ್ಟಿದ್ದಾನೆ.ಈಚೆಗೆ ನಿರುದ್ಯೋಗಿಯಾಗಿದ್ದ ಪುತ್ರ ಆದರೆ ತಂದೆ ಸಾಜಿದ್ ಅಕ್ರಮ್ 1998ರಲ್ಲಿ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಕ್ಕೆ ಬಂದಿದ್ದ ಎಂದು ಆಸ್ಟ್ರೇಲಿಯದ ಗೃಹಸಚಿವರು ತಿಳಿಸಿದ್ದಾರೆ. ಸಾಜಿದ್ 1998ರಲ್ಲಿ ವಿದ್ಯಾರ್ಥಿ ವೀಸಾ ಮೂಲಕ ಪಾಕ್‌ನಿಂದ ಆಸ್ಟ್ರೇಲಿಯಕ್ಕೆ ವಲಸೆ ಬಂದಿದ್ದ. ಬಳಿಕ ಸಂಗಾತಿ ವೀಸಾ ಆಗಿ ಅದನ್ನು ಬದಲಾಯಿಸಿದ್ದ ಸಾಜಿದ್ ಅಂದಿನಿಂದಲೂ ಸಿಡ್ನಿಯಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ.
ಹಣ್ಣಿನ ಅಂಗಡಿ ಮಾಲಕ
ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ಸಾಜಿದ್ ಹಣ್ಣಿನಂಗಡಿ ನಡೆಸುತ್ತಿದ್ದಾನೆ. ಪುತ್ರ ನವೀದ್ ಈ ಹಿಂದೆ ಇಟ್ಟಿಗೆ ಕೆಲಸ ಮಾಡುತ್ತಿದ್ದ ಎರಡು ತಿಂಗಳುಗಳ ಹಿಂದೆ ಸಂಸ್ಥೆ ನಷ್ಟದಲ್ಲಿದ್ದ ಕಾರಣ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು ಎನ್ನಲಾಗಿದೆ. ಅಲ್ಲದೆ 6 ವರ್ಷಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಜತೆ ಸಂಪರ್ಕ ಹೊಂದಿದ್ದ ಶಂಕೆಯಲ್ಲಿ ನವೀದ್‌ನನ್ನು ಆಸ್ಟ್ರೇಲಿಯ ಗುಪ್ತಚರ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು ಎನ್ನಲಾಗಿದೆ. ಸಾಜಿದ್ ಪರವಾನಿಗೆ ಇರುವ6 ಗನ್‌ಗಳನ್ನು ಹೊಂದಿದ್ದು ಇವನ್ನೇ ದಾಳಿಗೆ ಬಳಸಿದ್ದಾನೆ ಎಂದು ತಿಳಿದುಬಂದಿದೆ.


