ಮುಲ್ಕಿ : ಬಸ್ ನಿಲ್ದಾಣ ಬಳಿ ಪ್ರಯಾಣಿಕರಿಗಾಗಿ ನಿಂತಿದ್ದ ಆಟೋ ಗೆ ಅತೀ ವೇಗದಿಂದ ಬಂದ ಮಂಗಳೂರು ಕಡೆಯಿಂದ ಹೆದ್ದಾರಿಯಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಟೋಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಸ್ಥಳೀಯರ ಹಾಗೂ ಮಂಗಳೂರ ಉತ್ತರ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆಯಿಂದ ಕಾರು ಚಾಲಕನನ್ನು ಹಾಗೂ ಅದರಲ್ಲಿದ್ದವರನ್ನು ದ.ಕ ಗಡಿಭಾಗದ ಹೆಜಮಾಡಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಣಿಪಾಲದ ಮೂಲದ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಮಣಿಪಾಲ ಮೂಲದ ಕಾಲೇಜು ವಿದ್ಯಾರ್ಥಿಗಳು ಬಾಡಿಗೆ ಕಾರಿನಲ್ಲಿ ಮಂಗಳೂರಿನ ತಣ್ಣೀರು ಬಾವಿಯಿಂದ ಅತಿವೇಗದ ಚಾಲನೆ ಮೂಲಕ ಮಣಿಪಾಲಕ್ಕೆ ಹೊರಟಿದ್ದು ಮುಲ್ಕಿ ಬಸ್ ನಿಲ್ದಾಣದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ವೇಗ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾದು ಕುಳಿತಿದ್ದ ಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಆಟೋ ಚಾಲಕರಾದ ಎಳತ್ತೂರು ನಿವಾಸಿ ಪ್ರಶಾಂತ್ ನೆಲಗುಡ್ಡೆ, ಕೊಲ್ನಾಡು ನಿವಾಸಿ ಪ್ರಭಾಕರ ಶೆಟ್ಟಿ ಪವಾಡ ಸದೃಶ ಪಾರಾಗಿದ್ದು, ಆಟೋಗಳು ಜಖಂಗೊಂಡಿದೆ ಅಪಘಾತದ ಸಂದರ್ಭ ಕಾರ್ ಚಾಲಕ ಮತ್ತಷ್ಟು ಗಲಿಬಿಲಿ ಗೊಂಡಿದ್ದು ಕಾರನ್ನು ರಿವರ್ಸ್ ತೆಗೆಯುವ ಯತ್ನದಲ್ಲಿ ಭಾರೀ ಗಾತ್ರದ ಕಲ್ಲಿಗೆ ಡಿಕ್ಕಿ ಹೊಡೆದಾಗ ಕಾರಿನ ಟಯರ್ ಪಂಕ್ಚರ್ ಆಗಿದೆ. ಆದರೂ ಅದರ ಚಾಲಕ ಕಾರನ್ನು ನಿಲ್ಲಿಸಿದೆ ಸ್ಥಳದಿಂದ ಪರಾರಿಯಾಗಿ ಸುಮಾರು ಎರಡು ಕಿಮೀ ದೂರ ಚಲಿಸಿ ಹೆಜಮಾಡಿ ಚೆಕ್ ಪೋಸ್ಟ್ ಬಳಿಯ ಒಳ ರಸ್ತೆಯಲ್ಲಿ ಅಡಗಿ ಕುಳಿತಿದ್ದಾನೆ.
ಅಪಘಾತ ನಡೆದ ಕೂಡಲೇ ಪರಾರಿಯಾದ ಕಾರನ್ನು ಸ್ಥಳೀಯರು ಹಾಗೂ ಆಟೋ ಚಾಲಕರು ಬೆನ್ನಟ್ಟಿದ್ದು ಹೆಜಮಾಡಿ ಚೆಕ್ ಪೋಸ್ಟ್ ಬಳಿಯ ಒಳ ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿ ಸ್ಥಳಕ್ಕೆ ಧಾವಿಸಿ ಕಾರಿನ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಮಂಗಳೂರು ಟ್ರಾಫಿಕ್ ಪೊಲೀಸ್ ಮುಖಾಂತರ ಕಾರ್ ಚಾಲಕ ಹಾಗೂ ಇತರ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.