ಮುಂಬೈ : ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, ಕೇವಲ 15 ವರ್ಷದ ಪ್ರತಿಭಾವಂತ ಬ್ಯಾಟರ್ ವೈಭವ್ ಸೂರ್ಯವಂಶಿ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕಾಗಿ ಪ್ರಕಟಿಸಲಾದ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್, ಟೀಂ ಇಂಡಿಯಾ ಪರ ಕಣಕ್ಕಿಳಿದರೆ ಸಚಿನ್ ತೆಂಡೂಲ್ಕರ್ ಅವರ ಅತಿ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ದಾಖಲೆಯನ್ನು ಮುರಿಯಲಿದ್ದಾರೆ.
ವೈಭವ್ ಸೂರ್ಯವಂಶಿ ಕಳೆದ ಕೆಲ ತಿಂಗಳುಗಳಿಂದ ದೇಶೀಯ ಹಾಗೂ ಯುವ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಅವರ ಪ್ರತಿಭೆಗೆ ಆಯ್ಕೆ ಸಮಿತಿ ಮನ್ನಣೆ ನೀಡಿದೆ.
ಇದೇ ವೇಳೆ, ಎರಡು ವರ್ಷಗಳ ಹಿಂದೆ ಕೇಂದ್ರಿಯ ಗುತ್ತಿಗೆಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಇಂಗ್ಲೆಂಡ್, ಐರ್ಲೆಂಡ್ ವಿರುದ್ಧದ ಟಿ20 ಸರಣಿ, ಏಷ್ಯನ್ ಗೇಮ್ಸ್ ಹಾಗೂ ಶ್ರೀಲಂಕಾ ಪ್ರವಾಸಕ್ಕೆ ಅವರು ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಕೂಡ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾಹ್ ಅವರನ್ನು ಕೂಡ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇನ್ನೊಂದೆಡೆ, ಶ್ರೀಲಂಕಾ ವಿರುದ್ಧದ ಬಹುದಿನಗಳ ಸರಣಿಗೆ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ನಾಯಕರಾಗಿ ಹಾಗೂ ದೇವಧೂತ್ತ್ ಪಡಿಕ್ಕಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.


