ಮಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಹಿರಿಯ ಸಾಹಿತಿ ಡಾ. ನಾ ಡಿಸೋಜ (88) ನಿಧನರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದ ನಾ ಡಿಸೋಜಾ ಅವರು ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶರಾವತಿ ಮುಳುಗಡೆ ಪ್ರದೇಶದ ಹಿನ್ನೆಲೆ ಕಥನವಿದ್ದ ಇವರ ‘ದ್ವೀಪ’ ಕಾದಂಬರಿ ಸಿನಿಮಾ ಆಗಿತ್ತು. ಸೋಮವಾರ ಸಂಜೆ ಸಾಗರದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.
1964ರಲ್ಲಿ ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟಗೊಂಡಿತು. ನಂತರ ಮಂಜಿನ ಕಾನು, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ ಹೀಗೆ 40ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ.ನಾ ಡಿಸೋಜ ಅವರ ಪುತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಇದ್ದುದರಿಂದ ಅವರಿಗೆ ಮಂಗಳೂರಿನ ನಂಟು ಬಹುವಾಗಿತ್ತು. ಇಲ್ಲಿನ ಸಾಹಿತ್ಯ ವಲಯದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರು. ಮಂಗಳೂರಿನ ಸಂದೇಶ ಪ್ರತಿಷ್ಠಾನವು ಪ್ರತಿವರ್ಷ ಕೊಡ ಮಾಡುವ ಸಾಧಕರ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಅವರು ಕಾರ್ಯ ನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದಷ್ಟೇ ಅನಾರೋಗ್ಯದ ಕಾರಣದಿಂದಾಗಿ ಆ ಜವಾಬ್ದಾರಿಯಿಂದ ನಿವೃತ್ತಿ ಪಡೆದುಕೊಂಡಿದ್ದರು. ಮಂಗಳೂರು ಸೇರಿದಂತೆ ಕರಾವಳಿಯ ವಿವಿಧ ಕಾಲೇಜುಗಳು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಅವರು ಉಪನ್ಯಾಸ ನೀಡಿದ್ದಾರೆ. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.