Tuesday, August 4, 2026
Homeಜಿಲ್ಲೆಮಂಗಳೂರು : ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್‌ 146ನೇ ಜನ್ಮದಿನ ಆಚರಣೆ – ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ...

ಮಂಗಳೂರು : ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್‌ 146ನೇ ಜನ್ಮದಿನ ಆಚರಣೆ – ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸ್ಮರಣಾರ್ಥ ಕಾರ್ಯಕ್ರಮ.

ಮಂಗಳೂರು : ಸಹಕಾರಿ ಚಳವಳಿಯ ಶಿಲ್ಪಿ, ಸಹಕಾರಿ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಮೊಳಹಳ್ಳಿ ಶಿವರಾವ್‌ ಅವರ 146ನೇ ಜನ್ಮದಿನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಗೌರವಪೂರ್ವಕವಾಗಿ ಆಚರಿಸಲಾಯಿತು.

ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಮೊಳಹಳ್ಳಿ ಶಿವರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮೊಳಹಳ್ಳಿ ಶಿವರಾವ್ ಅವರು ಸಹಕಾರಿ ಕ್ಷೇತ್ರದ ಬೆಳವಣಿಗೆಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿತ್ವ. ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಇಂದು ಸಹಕಾರಿ ಸಂಸ್ಥೆಗಳು ಮುನ್ನಡೆಯುತ್ತಿದ್ದು, ಸಹಕಾರಿಗಳ ಒಗ್ಗಟ್ಟೇ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ” ಎಂದು ಹೇಳಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಸಾಹಿತಿ ಅರವಿಂದ ಚೊಕ್ಕಾಡಿ ರಚಿಸಿರುವ ಮೊಳಹಳ್ಳಿ ಶಿವರಾವ್ ಅವರ ಆಕರ ಗ್ರಂಥವನ್ನು ಗಣ್ಯರು ಬಿಡುಗಡೆಗೊಳಿಸಿದರು.

ಗ್ರಂಥದ ಮೂಲಕ ಮೊಳಹಳ್ಳಿ ಶಿವರಾವ್ ಅವರ ಜೀವನ, ಸಾಧನೆ ಹಾಗೂ ಸಹಕಾರಿ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಕ್ಯಾಂಸ್ಕೋ ಅಧ್ಯಕ್ಷ ಸತೀಶ್ಚಂದ್ರ, ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ, ಸಾಹಿತಿ ಅರವಿಂದ ಚೊಕ್ಕಾಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್ ಭಟ್, ಬ್ಯಾಂಕ್ ನಿರ್ದೇಶಕರು ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಳ್ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಸಹಕಾರಿ ಮೌಲ್ಯಗಳು, ಸೇವಾ ಮನೋಭಾವ ಮತ್ತು ಸಂಘಟಿತ ಶಕ್ತಿಯ ಮಹತ್ವವನ್ನು ನೆನಪಿಸಿದ ಈ ಕಾರ್ಯಕ್ರಮದಲ್ಲಿ, ಮೊಳಹಳ್ಳಿ ಶಿವರಾವ್ ಅವರ ಆದರ್ಶಗಳು ಇಂದಿಗೂ ಸಹಕಾರಿ ಕ್ಷೇತ್ರಕ್ಕೆ ಮಾರ್ಗದರ್ಶಿಯಾಗಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.

RELATED ARTICLES

LEAVE A REPLY

Please enter your comment!
Please enter your name here

Most Popular