Tuesday, March 24, 2026
Flats for sale
Homeಜಿಲ್ಲೆಮಂಗಳೂರು : ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ : ಚಾಲಕರಿಂದ ಗಂಭೀರ ಆರೋಪ, ದರ ವ್ಯತ್ಯಾಸದ...

ಮಂಗಳೂರು : ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ : ಚಾಲಕರಿಂದ ಗಂಭೀರ ಆರೋಪ, ದರ ವ್ಯತ್ಯಾಸದ ವಿರುದ್ಧ ಆಕ್ರೋಶ.

ಮಂಗಳೂರು : ಪ್ರವಾಸಿ ವಾಹನಗಳಲ್ಲಿ ಕಡ್ಡಾಯಗೊಳಿಸಿರುವ ಪ್ಯಾನಿಕ್ ಬಟನ್ ಅಳವಡಿಕೆ ಕುರಿತು ರಾಜ್ಯದ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ-ಮಾಲಕರಿಂದ ಗಂಭೀರ ಆರೋಪಗಳು ಕೇಳಿಬಂದಿವೆ. ಸರ್ಕಾರದ ಆದೇಶದಿಂದ ತಮ್ಮ ಮೇಲೆ ಅನ್ಯಾಯವಾಗಿದ್ದು, ಇದು ಉದ್ಯೋಗಕ್ಕೆ ಹೊಡೆತ ನೀಡಿದಂತಾಗಿದೆ ಎಂದು ದ.ಕ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ನ ಆಧ್ಯಕ್ಷರಾದ ಆನಂದ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರ ತುರ್ತಾಗಿ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿತ್ತು. ಈಗಾಗಲೇ ಹಲವು ನಿಯಮಗಳನ್ನು ಪಾಲಿಸಿಕೊಂಡು ಬಂದಿರುವ ಚಾಲಕರಿಗೆ ಈ ಹೊಸ ನಿಯಮ ಹೆಚ್ಚುವರಿ ಆರ್ಥಿಕ ಹೊರೆ ತಂದಿದೆ ಎಂದು ಅವರು ಹೇಳಿದ್ದಾರೆ. ಚಾಲಕರ ಮಾಹಿತಿಯಂತೆ, ಪ್ಯಾನಿಕ್ ಬಟನ್ ಸಾಧನದ ಮೂಲ ಬೆಲೆ ₹3,000 ರಿಂದ ₹4,000ರೊಳಗೆ ಇದ್ದು, ಪಕ್ಕದ ಕೇರಳ ರಾಜ್ಯದಲ್ಲಿ ಇದೇ ದರಕ್ಕೆ ಲಭ್ಯವಿದೆ. ಆದರೆ ರಾಜ್ಯದ ಸಾರಿಗೆ ಇಲಾಖೆ ಉಚ್ಚ ನ್ಯಾಯಾಲಯಕ್ಕೆ ₹8,250ರವರೆಗೆ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದು, ಈ ಯೋಜನೆಗಾಗಿ 12 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಈ ಕಂಪನಿಗಳು ಸಾಧನವನ್ನು ₹13,500ರಿಂದ ₹16,000ರವರೆಗೆ ಮಾರಾಟ ಮಾಡುತ್ತಿದ್ದು, ಯಾವುದೇ ಬಿಲ್ ನೀಡಲು ನಿರಾಕರಿಸುತ್ತಿವೆ ಎಂದು ಚಾಲಕರು ಆರೋಪಿಸಿದ್ದಾರೆ. ಫಿಟ್ನೆಸ್ ಸರ್ಟಿಫಿಕೆಟ್ (FC) ಪಡೆಯಲು ಅನಿವಾರ್ಯವಾಗಿರುವುದರಿಂದ ಚಾಲಕರು ಸಾಲಮಾಡಿ ಸಾಧನ ಅಳವಡಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ಈ ಪ್ಯಾನಿಕ್ ಬಟನ್ ಕಾರ್ಯಕ್ಷಮತೆಯ ಮೇಲೆಯೂ ಪ್ರಶ್ನೆಗಳು ಎದ್ದಿವೆ. ಅಪಾಯದ ಸಂದರ್ಭದಲ್ಲಿ ಬಟನ್ ಒತ್ತಿದರೂ, ಸಂದೇಶ ಕಂಟ್ರೋಲ್ ರೂಮ್‌ಗೆ ತಲುಪುತ್ತಿಲ್ಲ. ಸಂಬಂಧಿತ ಕಂಟ್ರೋಲ್ ರೂಮ್ ವ್ಯವಸ್ಥೆಯೇ ಇಲ್ಲ ಎಂಬ ಆರೋಪ ಕೇಳಿಬಂದಿದೆ. ತುರ್ತು ಪ್ರತಿಕ್ರಿಯೆಗಾಗಿ ಕರೆ ಬರುತ್ತಿಲ್ಲವೆಂಬುದರಿಂದ ಈ ಸಾಧನ “ಡಮ್ಮಿ” ಆಗಿದೆ ಎಂದು ಚಾಲಕರು ದೂರಿದ್ದಾರೆ.

ಇದರ ಜೊತೆಗೆ, ಸಾಧನದ ವಾರ್ಷಿಕ ರೀಚಾರ್ಜ್ ಶುಲ್ಕಕ್ಕೂ ಭಾರಿ ವ್ಯತ್ಯಾಸವಿದೆ. ಸಾರಿಗೆ ಇಲಾಖೆ ₹1,800 ಎಂದು ತಿಳಿಸಿದ್ದರೂ, ಕಂಪನಿಗಳು ₹3,800 ವರೆಗೆ ವಸೂಲಿ ಮಾಡುತ್ತಿವೆ. ರೀಚಾರ್ಜ್ ಮಾಡದ ವಾಹನಗಳಿಗೆ FC ನವೀಕರಣವನ್ನು RTO ಅಧಿಕಾರಿಗಳು ತಡೆಹಿಡಿಯುತ್ತಿದ್ದಾರೆ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಘೋಷಿಸಿದಂತೆ ₹1,800 ರೀಚಾರ್ಜ್ ಶುಲ್ಕವನ್ನು ಮಾತ್ರ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಟ್ಯಾಕ್ಸಿ ಚಾಲಕ-ಮಾಲಕರ ಪರವಾಗಿ ಸರ್ಕಾರ ಮತ್ತು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹರೀಶ್, ರಾಜೇಶ್ ,ಸುರೇಶ್ ಸಾಲಿಯಾನ್,ಹಾಗೂ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular