ಮಂಗಳೂರು : ಕುವೈಟ್ ದೇಶದ ಮಹಾರಾಜ ಗೌರವಾನ್ವಿತ ಶೇಖ್ ನವಾಫ್ ಅಲ್ – ಅಹ್ಮದ್ ಅಲ್ – ಜಭೀರ್ ಅಲ್-ಸಾಬ್ ಇವರು ದಿನಾಂಕ 16-12-2023 ರಂದು ನಿಧನರಾದ ಹಿನ್ನೆಲೆಯಲ್ಲಿ ಗಣ್ಯರ ಗೌರವಾರ್ಥವಾಗಿ ದಿನಾಂಕ 17-12-2023 ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಆಚರಿಸಲು ಭಾರತ ಸರ್ಕಾರ ನಿರ್ದೇಶನ ನೀಡಿದ ಪ್ರಯುಕ್ತ ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಿ ಕುವೈಟ್ ದೇಶದ ಮಹಾರಾಜರಿಗೆ ಸಂತಾಪ ಸೂಚಿಸಿದ್ದಾರೆ.
ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ದುರದೃಷ್ಟಕರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ ಎಂದು ಹೇಳಿದರು. ರಾಜಮನೆತನಕ್ಕೆ, ನಾಯಕತ್ವಕ್ಕೆ ಮತ್ತು ಕುವೈತ್‌ನ ಜನರಿಗೆ ನಾವು ನಮ್ಮ ಆಳವಾದ ಸಂತಾಪವನ್ನು ತಿಳಿಸುತ್ತೇವೆ ಎಂದು twitter X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಹಾಗೂ ಕುವೈಟ್ ನಡುವೆ ಆತ್ಮೀಯ ಭಾಂದವ್ಯ ಇರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಸೂಚನೆಯ ಮೇರೆಗೆ ಭಾನುವಾರದಂದು ಮಹಾನಗರಪಾಲಿಕೆ ಕಟ್ಟಡದಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಿ ಗಣ್ಯರಿಗೆ ಸಂತಾಪ ವ್ಯಕ್ತಪಡಿಸಲಾಯಿತು.


