ಮಂಗಳೂರು : ಶಿಕ್ಷಣ, ಸಮಾಜಸೇವೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಅಕ್ಷರ ರತ್ನ ಫೌಂಡೇಶನ್ (ರಿ.), ಮಂಗಳೂರು ಇದರ ಗೌರವಾಧ್ಯಕ್ಷರಾಗಿ ಅನಿವಾಸಿ ಭಾರತೀಯ ಶ್ರೀ ಅಂಬ್ರೋಸ್ ವೇಗಸ್ ಆಯ್ಕೆಯಾಗಿದ್ದಾರೆ.
ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ನೆರವು ನೀಡುವುದು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಒದಗಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಮತ್ತು ಸಾಧನೆಗಳನ್ನು ಗುರುತಿಸಿ ಉತ್ತೇಜಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಅಂಬ್ರೋಸ್ ವೇಗಸ್ ಅವರ ಆಯ್ಕೆಯಿಂದ ಸಂಸ್ಥೆಯ ಮುಂದಿನ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಮತ್ತಷ್ಟು ಬಲ ದೊರೆಯುವ ನಿರೀಕ್ಷೆಯಿದೆ. ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸುವ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.
‘ಲಿಟಲ್ ಸ್ಟೆಪ್ಸ್ ಪ್ರೀ-ಸ್ಕೂಲ್’ ಆರಂಭ
ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅಕ್ಷರ ರತ್ನ ಫೌಂಡೇಶನ್ ವತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ‘ಲಿಟಲ್ ಸ್ಟೆಪ್ಸ್ ಪ್ರೀ-ಸ್ಕೂಲ್’ ಆರಂಭಿಸಲಾಗಿದೆ.
ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಶಿಸ್ತು, ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಆಟ, ಚಟುವಟಿಕೆ ಹಾಗೂ ಪ್ರಾಯೋಗಿಕ ಅನುಭವಗಳ ಮೂಲಕ ಕಲಿಕೆಯನ್ನು ಸುಲಭಗೊಳಿಸುವುದು ಈ ಪ್ರೀ-ಸ್ಕೂಲ್ನ ಆಶಯವಾಗಿದೆ.
ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹವೇ ಗುರಿ
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸುವುದು, ಅಗತ್ಯವಿರುವ ಮಕ್ಕಳಿಗೆ ನೆರವು ನೀಡುವುದು ಹಾಗೂ ಅವರ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಮುಂದಿನ ದಿನಗಳಲ್ಲಿ ಶೈಕ್ಷಣಿಕ ಪ್ರೋತ್ಸಾಹ, ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಕಾರ್ಯಗಳಿಗೆ ಶಿಕ್ಷಣ ಪ್ರೇಮಿಗಳು, ದಾನಿಗಳು, ಗಣ್ಯರು ಹಾಗೂ ಸಾರ್ವಜನಿಕರ ಸಹಕಾರವನ್ನು ಪಡೆಯುವ ಉದ್ದೇಶವೂ ಸಂಸ್ಥೆಗಿದೆ.
“ಶಿಕ್ಷಣವೇ ಶಕ್ತಿ, ಸೇವೆಯೇ ಧ್ಯೇಯ, ವಿದ್ಯಾರ್ಥಿಗಳ ಸಾಧನೆಯೇ ನಮ್ಮ ಗುರಿ” ಎಂಬ ಆಶಯದೊಂದಿಗೆ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಅಕ್ಷರ ರತ್ನ ಫೌಂಡೇಶನ್ ಬದ್ಧವಾಗಿದೆ.
ಗೌರವಾಧ್ಯಕ್ಷರಾಗಿ ಆಯ್ಕೆಯಾದ ಅಂಬ್ರೋಸ್ ವೇಗಸ್ ಅವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ ಎಂದು ಸಂಸ್ಥಾಪಕ ಪವನ್ ರಾಜ್ ಕೊಲ್ಯ ತಿಳಿಸಿದ್ದಾರೆ.

