ಬೆಂಗಳೂರು : ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಅವರು ಇಂದು (ಗುರುವಾರ) ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜೊತೆಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಪ್ರಭಾರವನ್ನೂ ಎಂ.ಎನ್. ಅನುಚೇತ್ ಅವರಿಗೆ ವಹಿಸಲಾಗಿದೆ.
ಮೂಲತಃ ಕೋಲಾರ ಜಿಲ್ಲೆಯವರಾದ ಎಂ.ಎನ್. ಅನುಚೇತ್ ಅವರು ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ 2006ರಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ 2009ನೇ ಬ್ಯಾಚ್‌ನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಪೊಲೀಸ್ ಸೇವೆ (IPS)ಗೆ ಸೇರ್ಪಡೆಯಾದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅನುಚೇತ್ ಅವರು, ವಿಶೇಷವಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವಧಿಯಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಜನಮನ್ನಣೆ ಗಳಿಸಿದ್ದರು. ಹಲವು ಕೊಲೆ, ದರೋಡೆ, ಮಾದಕ ವಸ್ತುಗಳ ಸಾಗಾಟ ಹಾಗೂ ಸೇವನೆ ಪ್ರಕರಣಗಳನ್ನು ಭೇದಿಸಿ, ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಾಜ್ಯ ವಾರ್ತಾ ಇಲಾಖೆಯ ನೂತನ ಆಯುಕ್ತರಾಗಿ ಅವರ ನೇಮಕದಿಂದ ಇಲಾಖೆಯ ಆಡಳಿತ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಗಳಿಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

