ಬೆಂಗಳೂರು : ವೃದ್ಧ ತಾಯಿಯನ್ನೇ ಮಗಳು ಹಾಗೂ ಮೊಮ್ಮಗ ಸೇರಿ ಬಡಿದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸುಭಾಷ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಜಯಮ್ಮ (70) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಭಾಗ್ಯಲಕ್ಷ್ಮಿ ಹಾಗೂ ಮೊಮ್ಮಗ ಕುಶಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜೂನ್ 21ರ ರಾತ್ರಿ ಮದ್ಯಪಾನದ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತೀವ್ರಗೊಂಡು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ವೇಳೆ, ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ಸೇರಿ ಜಯಮ್ಮ ಅವರ ತಲೆಗೆ ರಾಗಿ ಮುದ್ದೆ ಮಾಡುವ ಕೋಲಿನಿಂದ ಬಲವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯ ಪರಿಣಾಮ ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ಆರೋಪಿಗಳು ಶವವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ಸಮಯದ ಬಳಿಕ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಅಜ್ಜಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಸ್ನೇಹಿತ ಮನೆಗೆ ಬಂದಾಗ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿಯಂತೆ, ಭಾಗ್ಯಲಕ್ಷ್ಮಿ ಮದ್ಯಪಾನದ ಚಟ ಹೊಂದಿದ್ದ ಕಾರಣ ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಮಾರು ಎರಡು ತಿಂಗಳ ಹಿಂದೆ ಹಾಸನದಿಂದ ಜಯಮ್ಮ ಮಗಳ ಮನೆಗೆ ವಾಸಕ್ಕೆ ಬಂದಿದ್ದರು. ಆದರೆ ಅಂದಿನಿಂದಲೇ ಮನೆಯಲ್ಲಿ ಪದೇಪದೇ ಗಲಾಟೆಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಭಾಗ್ಯಲಕ್ಷ್ಮಿ ಹಾಗೂ ಕುಶಾಲ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


