ಬೆಂಗಳೂರು : ಕೃಷಿ ಚಟುವಟಿಕೆಯಿಂದ ಬಂದ ಲಾಭ ಹಾಗೂ ಕುದುರೆ ಮಾರಾಟ ಮಾಡಿದ ಹಣವನ್ನು ಮನೆಯಲ್ಲಿಟ್ಟಿರುವುದನ್ನು ಪೊಲೀಸರು ಜಪ್ತಿ ವೇಳೆ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ವಾಪಸ್ ಕೊಡಿಸಬೇಕು ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಹತ್ಯೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಮತ್ತೋರ್ವ ಆರೋಪಿ ಪ್ರದೋಷ್ ಮನೆಯಲ್ಲಿದ್ದ 40.40 ಲಕ್ಷ ನಗದು ಹಣವನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಜಪ್ತಿ ಮಾಡಿದ್ದರು. ಪ್ರಸ್ತುತ ತುರ್ತು ಹಣದ ಅವಶ್ಯಕತೆಯಿದ್ದು, ಜಪ್ತಿ ಮಾಡಲಾದ ಹಣವನ್ನು ವಾಪಸ್ ನೀಡುವಂತೆ ಕೋರಿ ೫೭ನೇ ಸೆಷನ್ಸ್ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ದರ್ಶನ್ ಹಾಗೂ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ.
ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಪಿಪಿ ಅವರಿಗೆ ನ್ಯಾಯಾಲಯ ಸೂಚಿಸಿದೆ. ಮತ್ತೊಂದೆಡೆ ಪೊಲೀಸರು ಜಪ್ತಿ ಮಾಡಿರುವ ಹಣದ ಕುರಿತು ತನಿಖೆಯ ಅಗತ್ಯವಿದ್ದು, ತಮ್ಮ ವಶಕ್ಕೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಅರ್ಜಿ ಸಲ್ಲಿಸಿದೆ. ಆದಾಯ ತೆರಿಗೆ ಇಲಾಖೆಯ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.
ಇಷ್ಟೊಂದು ಹಣ ಮನೆಯಲ್ಲಿ ಯಾಕೆ:
ಇಷ್ಟೊಂದು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು ಯಾಕೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದರ್ಶನ್ ಅವರನ್ನು ಈ ಮೊದಲು ಪ್ರಶ್ನಿಸಿದ್ದರು. ಅಲ್ಲದೇ ಮಾಜಿ ಕಾರ್ಪೋರೆಟರ್ ಒಬ್ಬರು ದರ್ಶನ್‌ಗೆ ಹಣ ನೀಡಿದ್ದಾರೆ ಎಂಬುದಕ್ಕೆ ಪೊಲೀಸರು ಮಾಜಿ ಕಾರ್ಪೋರೆಟ್‌ರನನ್ನು ನೋಟಿಸ್ ನೀಡಿ ವಿಚಾರಣೆ ಮಾಡಿದ್ದರು. ಅಲ್ಲದೇ ಮನೆಯಲ್ಲಿ ನಲವತ್ತು ಲಕ್ಷ ರೂ. ದೊರೆತಿರುವ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದರ್ಶನ್ ಮನೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಜನ ಆರೋಪಿಗಳನ್ನು ಬಂಧಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಹಣದ ವ್ಯವಹಾರ ನಡೆಸಿರುವ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಆರೋಪಿಗಳು ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾದ ಸಂದರ್ಭದಲ್ಲಿ ಜಪ್ತಿ ಮಾಡಿರುವ ಹಣವನ್ನು ಆರೋಗ್ಯ ಚಿಕತ್ಸೆ ಸೇರಿಂತೆ ದೈನಂದಿನ ಖರ್ಚಿಗೆ ಅವಶ್ಯಕತೆ ಇದೆ ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ.