ಬಾಗಲಕೋಟೆ : ಕೂಡಲಸಂಗಮದಲ್ಲಿ ಹಾಲಿ ಇರುವ ಲಿಂಗಾಯತ ಪAಚಮಸಾಲಿ ಪೀಠದೊಂದಿಗಿನ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಸಂಬAಧ ಕಳಚಿ ಬಿದ್ದಂತೆ ಆಗಿದೆ. ಆ ಪೀಠದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಜತೆಗೆ ಸಂಧಾನಕ್ಕೆ ಈಗ ಶ್ರೀಗಳಿಗೂ ಮನಸ್ಸಿದ್ದಂತಿಲ್ಲ. ಅವರನ್ನೇ ಮುಂದುವರಿಸಲು ಕಾಶಪ್ಪನವರಿಗೂ ಇಚ್ಛೆಯಿಲ್ಲ. ಹೀಗಾಗಿ ಕೂಡಲಸಂಗಮದಲ್ಲೇ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಳೆ ಪೀಠದ ಹೆಸರಿನಲ್ಲಿ ಹೊಸ ಮಠವನ್ನು ಕಟ್ಟುವರೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಸಭೆಯಲ್ಲಿ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಛಾಟಿಸುವ ನಿರ್ಧಾರ ಪ್ರಕಟಿಸಿದ ನಂತರ ಸೋಮವಾರ ಶ್ರೀಗಳು ಕೂಡಲಸಂಗಮಕ್ಕೆ ಆಗಮಿಸಿ ಭಕ್ತರೊಂದಿಗೆ ಸಮಾಲೋಚನೆ ನಡೆಸಿದ್ದರು. ಶೀಘ್ರದಲ್ಲಿ ರಾಜ್ಯಮಟ್ಟದ ಸಭೆ ನಡೆಸುವ ನಿರ್ಧಾರ ಪ್ರಕಟಿಸಿದ್ದರು. ಶನಿವಾರವೇ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, ಶಾಸಕರಾದ ಅರವಿಂದ ಬೆಲ್ಲದ, ಸಿಸಿ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಕೂಡಲಸಂಗಮದಲ್ಲಿ ಹೊಸದಾದ ಜಾಗದಲ್ಲಿ ಲಿಂಗಾಯತ ಪAಚಮಸಾಲಿ ಪೀಠದ ಕಟ್ಟಡ ಕಟ್ಟಿಸುವ ಆಸಕ್ತಿ ಸ್ವಾಮೀಜಿಯಲ್ಲಿದೆ. ಅದಕ್ಕಾಗಿ ರಾಜ್ಯ ಮಟ್ಟದ ಪ್ರಮುಖ ನಾಯಕರ ಸಭೆಗೆ ಅವರು ಆಸಕ್ತಿ ತೋರಿಸಿದ್ದು, ಅಲ್ಲಿಂದ ಹೊರಹೊಮ್ಮುವ ತೀರ್ಮಾನ ನೋಡಿಕೊಂಡು ಸ್ವಾಮೀಜಿ ಮುಂದಡಿ ಇಡುವ ತೀರ್ಮಾನ ಕೈಗೊಂಡಿದ್ದಾರೆ. ಹೊಸ ಪೀಠ ಕೂಡಲಸಂಗಮದಲ್ಲಿ ತಲೆ ಎತ್ತಿದಲ್ಲಿ ಸಮಾಜದ ನಾಲ್ಕನೇ ಪೀಠ ಜನ್ಮತಾಳಿದಂತೆ ಆಗಲಿದೆ. ಹರಿಹರದಲ್ಲಿ ಮೊದಲಿನಿಂದಲೂ ಹಳೇಪೀಠವಿದ್ದು, ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಪೀಠ ಸ್ಥಾಪನೆಯಾಗಿತ್ತು. ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಮೂರನೇ ಪೀಠ ಸ್ಥಾಪನೆಯಾಗಿದ್ದು, ನಾಲ್ಕನೇ ಪೀಠವೂ ಕೂಡಲ ಸಂಗಮದಲ್ಲಿ ತಲೆ ಎತ್ತಲಿದೆ. ಬಸವಜಯ ಮೃತ್ಯುಂಜಯ ಶ್ರೀಗಳ ಉಚ್ಛಾಟನೆಯಿಂದ ತೆರವಾಗಿರುವ ಹಾಲಿಪೀಠಕ್ಕೆ ಟ್ರಸ್ಟ್ ಯಾರನ್ನು ಹೊಸ ಪೀಠಾಧಿಪತಿಯಾಗಿ ನೇಮಿಸಲಿದೆ ಎಂಬುದನ್ನು ಸಹ ಕಾದುನೋಡಬೇಕಿದೆ.
ಕೂಡಲಸಂಗಮದಲ್ಲಿ ಶ್ರೀಗಳಿಗೆ ಪೀಠ ಕಟ್ಟಲು ಹದಿಮೂರು ಗುಂಟೆ ಜಾಗವಿದ್ದು, ಕೆಲ ಭಕ್ತರು ಅದರ ಹೊರತಾಗಿ ಹೊಸ ಸ್ಥಳ ಗುರುತಿಸಿದರೂ ನಾವು ಖರೀದಿಸಿ ಕೊಡುತ್ತೇವೆ ಎಂದು ಮುAದೆ ಬಂದಿದ್ದಾರೆ ಎಂದು ಹೇಳಲಾಗಿದೆ.