ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ಚೂರಿ ತೋರಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಯುವತಿಯ ದೂರಿನ ಆಧಾರದಲ್ಲಿ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಯುವತಿ ಪ್ರತಿದಿನದಂತೆ ಪುತ್ತೂರಿನಿಂದ ಮಂಗಳೂರಿಗೆ ಕೆಲಸಕ್ಕೆ ತೆರಳಲು ಮನೆಯಿಂದ ಹೊರಟು, ಪುರುಷರಕಟ್ಟೆಯಲ್ಲಿ ತನ್ನ ಸ್ಕೂಟಿಯನ್ನು ಪಾರ್ಕ್ ಮಾಡುತ್ತಿದ್ದ ವೇಳೆ ಕೆಲ ಯುವಕರು ಚೂರಿ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಭಯಗೊಂಡ ಯುವತಿ ಅಲ್ಲಿಂದ ಆಟೋದಲ್ಲಿ ಪುತ್ತೂರಿನತ್ತ ತೆರಳಿದ್ದಾರೆ.
ಆಟೋದಲ್ಲಿ ತೆರಳುತ್ತಿದ್ದ ಯುವತಿಯನ್ನು ಥಾರ್ ಕಾರಿನಲ್ಲಿ ಬಂದ ಸುಮಾರು ಆರು ಯುವಕರು ಬೆನ್ನಟ್ಟಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚೂರಿ ಹಿಡಿದು ಬೆದರಿಕೆ ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಯುವತಿ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಪ್ರಮುಖರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು ಆರೋಪಿತ ಆರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


