ನ್ಯೂಯಾರ್ಕ್ : ವೆನೆಜುವೆಲಾ ನಾಯಕಿ ಮಾರಿಯಾ ಮಚಾಡೊ ತಮ್ಮ ನೊಬೆಲ್ ಶಾಂತಿ ಪದಕವನ್ನು ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ ಬೆನ್ನಲ್ಲೇ ನೊಬೆಲ್ ಸಮಿತಿ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿ, ನೊಬೆಲ್ ಫೌಂಡೇಶನ್ ನೀಡುವ ಪ್ರಶಸ್ತಿಗಳನ್ನು ಇತರರಿಗೆ ಸಾಂಕೇತಿಕವಾಗಿಯೂ ನೀಡುವಂತಿಲ್ಲ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದು ಮಚಾಡೋ ಅವರ ನಡೆದೆ ಅಸಮಾಧಾನ ವ್ಯಕ್ತಪಡಿಸಿದೆ. ಮಾನವ ಕುಲಕ್ಕೆ ಉಪಕಾರಿಯಾದವರಿಗೆ ಮಾತ್ರ ಪ್ರಶಸ್ತಿ ನೀಡಬೇಕು ಎಂದು ಅಲ್‌ಫ್ರೆಡ್ ನೊಬೆಲ್ ಅವರ ಉಯಿಲು (ವಿಲ್) ಹೇಳುತ್ತದೆ. ಜತೆಗೆ ಪ್ರಶಸ್ತಿಯನ್ನು ನೀಡುವ ಹಕ್ಕು ಯಾರಿಗೆ ಇದೆ ಎಂಬುದನ್ನೂ ಅದು ನಿರ್ದಿಷ್ಟವಾಗಿ ಹೇಳುತ್ತದೆ. ಅದರನ್ವಯ ನೊಬೆಲ್ ಪ್ರಶಸ್ತಿಯನ್ನು ಒಬ್ಬರಿಗೆ ನೀಡುವ ಅಧಿಕಾರ ಇರುವುದು ನೊಬೆಲ್ ಫೌಂಡೇಷನ್‌ಗೆ ಮಾತ್ರ ಎಂದು ಸಮಿತಿ ಖಡಾಖಂಡಿತವಾಗಿ ಹೇಳಿದೆ.
ಡಿಸೆಂಬರ್ ೧೫ರಂದು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಚಾದೊ ಅವರು ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿ ಟ್ರಂಪ್ ಅವರಿಗೆ ಪದಕವನ್ನು ಪ್ರದಾನ ಮಾಡಿದ ನಂತರ ಈ ಸ್ಪಷ್ಟೀಕರಣ ಬಂದಿರುವುದು ಗಮನಾರ್ಹ. ಆದರೆ ನೊಬೆಲ್ ಸಮಿತಿ ತನ್ನ ಹೇಳಿಕೆಯಲ್ಲಿ ಟ್ರಂಪ್ ಆಗಲೀ, ಮಚಾಡೋ ಅವರ ಹೆಸರಾಗಲೀ ಉಲ್ಲೇಖಿಸಿಲ್ಲ.
ನೊಬೆಲ್ ಪ್ರಶಸ್ತಿಯನ್ನು ಮಚಾಡೋ ಅವರು ಟ್ರಂಪ್‌ಗೆ ನೀಡಬಹುದು ಎಂಬ ಸುದ್ದಿ ಹರಿದಾಡಿದಾಗಲೂ ನೊಬೆಲ್ ಸಮಿತಿ ಸ್ಪಷ್ಟೀಕರಣ ನೀಡಿ, ಹಾಗೆ ಬೇರೊಬ್ಬರಿಗೆ ಪ್ರಶಸ್ತಿ ನೀಡಲು ಬರುವುದಿಲ್ಲ ಎಂದು ಹೇಳಿತ್ತು. ಆದರೂ ಮಚಾಡೊ ಟ್ರಂಪ್ ಅವರಿಗೆ ಪ್ರಶಸ್ತಿ ನೀಡಿರುವುದು ಸಮಿತಿಯ ಅಸಮಾಧಾನ ಹಾಗೂ ಪರೋಕ್ಷ ಆಕ್ಷೇಪಕ್ಕೆ ಕಾರಣವಾಗಿದೆ


