ನ್ಯೂಯಾರ್ಕ್ : ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡುವ ಪಾಕಿಸ್ತಾನದ ಹೇಳಿಕೆಗಳು ಪೊಳ್ಳು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಯ ಜಾಗತಿಕ ಕೇಂದ್ರವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಪಾಕಿಸ್ತಾನ ಏಕೆ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಭಯೋತ್ಪಾದನೆ, ಯಾವುದೇ ರೂಪ, ಪ್ರಕಾರ ಮತ್ತು ಉದ್ದೇಶ ಏನೇ ಇರಲಿ, ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹರೀಶ್ ಹೇಳಿದ್ದಾರೆ.
ಪರ್ವತನೇನಿ ಹರೀಶ್ ಭಯೋತ್ಪಾದನೆಯ ಬಗ್ಗೆ ಉಲ್ಲೇಖಿಸುವಾಗ ಪಾಕಿಸ್ತಾನಕ್ಕೆ ಕನ್ನಡಿಯನ್ನು ತೋರಿಸಿದ್ದಾರೆ. ಭಾರತ ಯಾವಾಗಲೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಬಲಿಯಾಗಿದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರಿಂದ ಭಾರತವು ಬಹಳ ಹಿಂದಿನಿAದಲೂ ಬಲಿಯಾಗಿದೆ. ಯಾವುದೇ ರೀತಿಯ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂಬುದು ನಮ್ಮ ನಿಲುವು ಸ್ಪಷ್ಟವಾಗಿದೆ. ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎತ್ತಿದೆ. ಕೆಲವು ದಿನಗಳ ಹಿಂದೆ, ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವರ ಹೇಳಿಕೆಗೆ ಭಾರತ ತಕ್ಕ ಉತ್ತರ ನೀಡಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ಹೆಚ್ಚಿನ ಸಂಖ್ಯೆಯ ಜನರು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಈ ಮತದಾನವು ಅವರ ಆಯ್ಕೆಯನ್ನು ಸ್ಪಷ್ಟಪಡಿಸಿದೆ.
ಪಾಕಿಸ್ತಾನಕ್ಕೆ ಹೋಲಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ಬಲವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತದ ರಾಯಭಾರಿ ಪರ್ವತನೇನಿ ಹರೀಶ್ ಮಂಗಳವಾರ ಸ್ಪಷ್ಟ ಮಾತುಗಳಲ್ಲಿ, ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದರು. ಕಾಶ್ಮೀರದ ಕುರಿತು ಪಾಕಿಸ್ತಾನದ ಪ್ರಚಾರವನ್ನೂ ಅವರು ಟೀಕಿಸಿದ್ದಾರೆ. ಪಾಕಿಸ್ತಾನದ ಸುಳ್ಳು ಮತ್ತು ಪ್ರಚಾರವು ಕಾಶ್ಮೀರದ ಮೂಲ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಶ್ಮೀರದ ಕೆಲವು ಭಾಗಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಪಾಕಿಸ್ತಾನ ಭಾರತ ಮತ್ತು ಕಾಶ್ಮೀರದ ವಿರುದ್ಧದ ತನ್ನ ಪ್ರಚಾರ ಅಭಿಯಾನವನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.