ನವದೆಹಲಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಹಾಗೂ ಸಂತ ಚಿನ್ಮಯ್ ಕೃಷ್ಣ ದಾಸ್‌ರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಅಲ್ಲಿನ ಮಧ್ಯಂತರ ಸರ್ಕಾರಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒತ್ತಾಯಿಸಿದೆ.
ಜತೆಗೆ, ಬಾಂಗ್ಲಾದೇಶದ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯತರ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ಬಾಂಗ್ಲಾದಲ್ಲಿ
ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಜಾಗತಿಕ ಅಭಿಪ್ರಾಯವನ್ನು ಮೂಡಿಸಲು ಸಾಧ್ಯವಾದಷ್ಟು ಬೇಗ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮನವಿ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು, ಮಹಿಳೆಯರು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸುತ್ತಿರುವ ದಾಳಿಗಳು ಹಾಗೂ ದೌರ್ಜನ್ಯಗಳು ಅತ್ಯಂತ ಕಳವಳಕಾರಿಯಾಗಿದೆ. ಇದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.