ನವದೆಹಲಿ : ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಅಕ್ರಮಗಳ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗದ ಸಹಕಾರದಿಂದ ಈ ಎರಡೂ ರಾಜ್ಯಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆ ಎತ್ತಿದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟದ ಏಕತೆ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ. ಬಿಜೆಪಿ ನಡೆಸುತ್ತಿರುವ ಕೋಮು ರಾಜಕೀಯದ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು, ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಅಸ್ಸಾಂ ಮತ್ತು ಬಂಗಾಳದಲ್ಲಿ ಬಿಜೆಪಿ ಗೆಲುವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಕೇರಳದಲ್ಲಿ ಕಾಂಗ್ರೆಸ್ ಗೆಲುವನ್ನು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದರ ಮಧ್ಯೆ, ತಮಿಳುನಾಡಿನಲ್ಲಿ ಉತ್ತಮ ಪ್ರದರ್ಶನ ನೀಡಿದ ನಟ-ರಾಜಕಾರಣಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷದ ಅಭ್ಯರ್ಥಿಗಳಿಗೆ ರಾಹುಲ್ ಗಾಂಧಿ ಅಭಿನಂದನೆಗಳನ್ನು ತಿಳಿಸಿದ್ದಾರೆ.


