ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ದಾಖಲೆ ಪ್ರಶ್ನಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಯನ್ನು ಸುಪ್ರೀಂಕೋರ್ಟ್ ಈಗ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ತಮ್ಮ ವಿರುದ್ಧ ಹೊರಡಿಸಿರುವ ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಹೀಗಾಗಿ ಹೈಕೋರ್ಟ್ ಆದೇಶ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಕೇಜ್ರಿವಾಲ್‌ಗೆ ಮುಖಭಂಗವಾಗಿದೆ. ಆದ್ದರಿಂದ ಕೇಜ್ರಿವಾಲ್ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ. ಪ್ರಧಾನಿಯವರ ಶೈಕ್ಷಣಿಕ ಅರ್ಹತೆ ಅದರಲ್ಲೂ ಮುಖ್ಯವಾಗಿ ಗುಜರಾತ್ ಹಾಗೂ ದೆಹಲಿ ವಿಶ್ವ ವಿದ್ಯಾಲಯಗಳಿಂದ ಪಡೆದಿರುವ ಪದವಿಯ ಸಿಂಧುತ್ವ ವನ್ನು ಕೇಜ್ರಿವಾಲ್ ಬಹಿರಂಗ ಸಭೆಗಳಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು. ಕೇಜ್ರಿವಾಲ್ ಅವರ ಟೀಕೆ ಅವಹೇಳನಕಾರಿಯಾಗಿರುವುದರಿಂದ ಗುಜರಾತ್ ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ವಿವಿಯ ರಿಜಿಸ್ಟರ್ ಪಿಯೂಷ್ ಪಟೇಲ್ ಸುಪ್ರೀಂಕೋರ್ಟ್ನಲ್ಲಿ ಮಾನನಷ್ಟ ದಾವೆ ಹೂಡಿದ್ದಾರೆ. ಹಾಗೆಯೇ ಈ ವಿಷಯದಲ್ಲಿ ಕೇಜ್ರಿ ವಾಲ್ ಜೊತೆ ದನಿಗೂಡಿಸಿದ್ದ ಆಪ್ ನಾಯಕ ಸಂಜಯ್ ಸಿಂಗ್ ಅವರನ್ನೂ ಪ್ರಕರಣದ ಆರೋಪಿಯಾಗಿ ಹೆಸರಿಸಿದ್ದಾರೆ.ಪ್ರಧಾನಿಯವರ ಶೈಕ್ಷಣಿಕ ವಿಷಯದಲ್ಲಿ ಪಾರ ದರ್ಶಕತೆ ಪ್ರದರ್ಶಿಸಬೇಕೆಂದು ಕೇಜ್ರಿವಾಲ್ ಒತ್ತಾಯಿಸಿದ್ದರು.