ನವದೆಹಲಿ :ದೇಶ ಏನು ಬಯಸುತ್ತಿದೆಯೋ ಅದನ್ನೇ ಮೋದಿ ಸರ್ಕಾರ ಮಾಡುತ್ತದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ ಬೆನ್ನಲ್ಲೇ ಸೋಮವಾರ ದಿನಪೂರ್ತಿ
ಕದನ ಕುತೂಹಲ’ಕ್ಕೆ ಎಡೆಮಾಡಿಕೊಡುವ ಘಟನಾವಳಿಗಳು ದೆಹಲಿಯಲ್ಲಿ ನಡೆದಿವೆ. ಪಹಲ್ಗಾಮ್ ದಾಳಿಯ ನಂತರ ಉಭಯ ದೇಶಗಳ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿರುವ ನಡುವೆಯೇ ನಾಳೆ (ಮೇ ೭) ದೇಶಾದ್ಯಂತ ಮಾಕ್ ಡ್ರಿಲ್ (ಅಣಕು ಪ್ರದರ್ಶನ) ನಡೆಸಲು ಸೇನೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇಂಥ ಅಣಕು ಪ್ರದರ್ಶನವನ್ನು 1971ರ ಯುದ್ಧಕ್ಕೂ ಕೆಲ ದಿನಗಳ ಮುಂಚೆ ಭಾರತೀಯ ಸೇನೆ ಮಾಡಿತ್ತು. ಅದಾದ ಮೇಲೆ ಇಂಥದ್ದೊAದು ಅಣಕು ಪ್ರದರ್ಶನವನ್ನು ಮಾಡುತ್ತಿರುವುದು ಇದೇ ಮೊದಲು. ಯುದ್ಧದ ಸಂದರ್ಭದಲ್ಲಿ ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಮಾಕ್ ಡ್ರಿಲ್ ಮೂಲಕ ತೋರಿಸಲಾಗುತ್ತದೆ.
ಈ ಬಗ್ಗೆ ಖುದ್ದು ಕೇಂದ್ರ ಗೃಹ ಇಲಾಖೆ ದೇಶದ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದು, ನಾಗರಿಕರ ರಕ್ಷಣೆ ಸಂಬAಧ ಭದ್ರತಾ ತಾಲೀಮು ನಡೆಸುವಂತೆ ಹೇಳಿದೆ. ಒಟ್ಟು ೫ ಹಂತಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂದು ವರದಿಯಾಗಿದೆ. ವಾಯುದಾಳಿ ನಡೆದರೆ ಮುನ್ನೆಚ್ಚರಿಕೆ ಕ್ರಮವಾಗಿ ಸೈರನ್‌ಗಳನ್ನು ಹೊಡೆಯಬೇಕು ಎಂದೂ ಕೇಂದ್ರ ರಾಜ್ಯಗಳಿಗೆ ಸೂಚನೆ ನೀಡಿದೆ. ಇದೆಲ್ಲದರ ಮಧ್ಯೆ ಸೋಮವಾರವೂ ಮೋದಿ ಸರಣಿ ಸಭೆ ನಡೆಸಿದ್ದಾರೆ. ಮಧ್ಯಾಹ್ನದಷ್ಟೊತ್ತಿಗೆ ರಕ್ಷಣಾ ಕಾರ್ಯದರ್ಶಿ ಜತೆ ಒನ್-ಟು-ಒನ್ ಸಭೆ ನಡೆಸಿದ ಮೋದಿ ಸಮಗ್ರ ಮಾಹಿತಿಯನ್ನು ಕೇಳಿ ಪಡೆದುಕೊಂಡಿದ್ದಾರೆ. ಸಂಜೆ ಅಜಿತ್ ದೋವಲ್ ಕೂಡ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇಷ್ಟೆಲ್ಲ ಮೀಟಿಂಗ್‌ಗಳ ನಡುವೆಯೂ ಪುಟಿನ್ ಜತೆ ಫೋನ್‌ನಲ್ಲಿ ಮಾತನಾಡಿದ ಮೋದಿ ಭಯೋತ್ಪಾದನೆ ಮಟ್ಟಹಾಕಲು ಬೆಂಬಲ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಎಂಥದೇ ಸಂದರ್ಭದಲ್ಲೂ ರಷ್ಯಾ ಭಾರತದ ಬೆನ್ನಿಗೆ ನಿಲ್ಲುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಸಿಂಧೂ ನದಿ ಒಪ್ಪಂದ ಅಮಾನತ್ತು ಮತ್ತು ಚೆನಾಬ್ ನದಿ ನೀರು ಹರಿವು ತಡೆಹಿಡಿದು ಪಾಕ್‌ಗೆ ಜಲಾಘಾತ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ರೇಂಜ್‌ನಲ್ಲಿರುವ ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಸಲಾಲ್ ಮತ್ತು ಬಾಗ್ಲಿಹಾರ್ ಡ್ಯಾಂಗಳಲ್ಲಿ ಜಲಾಶಯ ಸಾಮರ್ಥ್ಯವನ್ನು ಹೆಚ್ಚಿಸುವ ಕಾಮಗಾರಿಯನ್ನು ಭಾರತ ಆರಂಭಿಸಿದೆ. ಸಲಾಲ್ ಮತ್ತು ಬಾಗ್ಲಿಹಾರ್ ಜಲಾಶಯದಲ್ಲಿ ಶೇಖರವಾದ ಹೂಳು ತೆಗೆದುಹಾಕಲು ಮೇ ೧ ರಿಂದ ೩ ದಿನಗಳ ಕಾಲ ಫ್ಲಶಿಂಗ್ ಪ್ರಕ್ರಿಯೆಯನ್ನು
ನಡೆಸಲಾಗಿದೆ. ಈ ಜಲಾಶಯಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿದರೆ ಪಾಕ್‌ಗೆ ಹರಿಯುವ ಸಿಂಧೂ ಹಾಗೂ ಅದರ ಉಪನದಿಗಳ ನೀರನ್ನು ಇಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿಡಬಹುದು ಎಂದು ಮಾಹಿತಿ ತಿಳಿದಿದೆ.