ತುಮಕೂರು : ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಗೇಂದ್ರ (30) ಎಂಬಾತ ಸಜೀವ ದಹನವಾಗಿದ್ದು, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಅಂಕೋಲಾಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಯಾಣದ ವೇಳೆ ನಾಗೇಂದ್ರ ಹಾಗೂ ಯುವತಿಯ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ನಾಗೇಂದ್ರ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ, ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಭಯಗೊಂಡ ಯುವತಿ ಚಲಿಸುತ್ತಿದ್ದ ಕಾರಿನಿಂದಲೇ ಜಿಗಿದಿದ್ದು, ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ನಾಗೇಂದ್ರ ಕಾರಿನಲ್ಲೇ ಸಜೀವ ದಹನಗೊಂಡಿದ್ದಾನೆ. ಗಂಭೀರ ಗಾಯಗೊಂಡ ಯುವತಿಯನ್ನು ತಕ್ಷಣ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿ ಸ್ಫೋಟಕ ವಸ್ತು ಅಥವಾ ಬಾಂಬ್ ಇತ್ತೇ ಎಂಬ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



