ಭಾರತದೊಂದಿಗಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕ ನಡುವೆ ಮತ್ತೊಮ್ಮೆ ಬಿಗುವಿನ ವಾತಾವರಣ ನಿರ್ಮಾಣವಾದಂತಿದೆ. ಈ ಹಿನ್ನೆಲೆಯಲ್ಲಿ ಗಡಿ ವಿವಾದದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕ ಅಧಿಕಾರಿಗಳಿಗೆ ಚೀನಾ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಪೆಂಟಗನ್ ಮಂಡಿಸಿದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಗಡಿಯಲ್ಲಿ ಸ್ಥಿರತೆಯನ್ನು ಸ್ಥಾಪಿಸುವುದು ಮತ್ತು ಇತರ ಪ್ರದೇಶಗಳಲ್ಲಿನ ಬಿಕ್ಕಟ್ಟಿನಿಂದ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹಾನಿಯಾಗದಂತೆ ನೋಡಿಕೊಳ್ಳುವುದು ಚೀನಾದ ಉದ್ದೇಶವಾಗಿದೆ ಎಂದು ವರದಿ ಹೇಳಿದೆ. ನೈಜ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ) ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಇದೇ ಕಾರಣಕ್ಕೆ ಅವರು ಅಮೆರಿಕದ ಹಸ್ತಕ್ಷೇಪವನ್ನು ಇಷ್ಟಪಡುತ್ತಿಲ್ಲ.