ಉಡುಪಿ : ಸಾಕೇತ್ ರಾಜನ್ ಎನ್‌ಕೌಂಟರ್ ಬಳಿಕ ಕೈಗೊಂಡ ಕ್ರಮಗಳ ಮೂಲಕ ತಣ್ಣಗಾಗಿದ್ದ ನಕ್ಸಲೀಯ ಚಟುವಟಿಕೆ ಪಶ್ಚಿಮ ಘಟ್ಟದಲ್ಲಿ ಮತ್ತೆ ಬಿರುಸಾಗಿರುವುದು ಕಂಡುಬAದಿದ್ದು,ಜಿಲ್ಲೆಯ ಬೈಂದೂರು ತಾಲೂಕಿನ ಉದಯನಗರ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ನಕ್ಸಲರು ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿದೆ.ಈ ತಂಡ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರುಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿದೆ. ಹೀಗೆ ಬಂದ ನಕ್ಸಲರು ಪೊಲೀಸರ ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ಸಾಕೇತ್ನ ನೆನಪಿಗಾಗಿ ನಕ್ಸಲ್ ಹುತಾತ್ಮ ದಿನಾಚರಣೆ ಆಚರಿಸಲು ಮುಂದಾಗಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲಿನ ಉದಯನಗರದ ಮನೆಯೊಂದರ ಮುಂಭಾಗ ಮಧ್ಯರಾತ್ರಿ ೨.೩೦ರ ಸುಮಾರಿಗೆ ನಕ್ಸಲರು ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿ ದಟ್ಟ ಹಸಿರು ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು, ಕೈಯಲ್ಲಿ ಬಂದೂಕು ಹಿಡಿದಿದ್ದರು ಎಂದು
ತಿಳಿಸಿದ್ದಾರೆ.
ಉದಯನಗರ ಗುಂಡನ ಹೊಳೆ ನಿವಾಸಿಯ ಮಾಹಿತಿ ಆಧರಿಸಿ ಎಎನ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಹಾಗೂ ವಿಚಾರಣೆ ನಡೆಸಿದೆ. ನಕ್ಸಲರ ಮುಖ ಚಹರೆ, ಎಷ್ಟು ಮಂದಿ ಇದ್ದರು, ಯಾವ ಆಯುಧಗಳನ್ನು ಹೊಂದಿದ್ದರು ಎAಬುದನ್ನು ಸ್ಪಷ್ಟವಾಗಿ ಹೇಳಲು ಮಾಹಿತಿದಾರರಿಗೆ ಸಾಧ್ಯವಾಗಿಲ್ಲ.
ಕೊಲ್ಲೂರು ವ್ಯಾಪ್ತಿಯಲ್ಲೂ ನಕ್ಸಲರ ಓಡಾಟ ಕಂಡುಬAದಿದೆ ಎನ್ನಲಾಗಿದ್ದು, ಕೊಲ್ಲೂರಿನ ಹಲವೆಡೆ ಎಎನ್‌ಎಫ್ ಬಿಗಿ ಭದ್ರತೆ ಮಾಡಿದೆ. ಕೊಲ್ಲೂರು ಠಾಣಾ ವ್ಯಾಪ್ತಿಯ ಹಲವೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಉದಯ ನಗರಕ್ಕೆ ಎಎನ್‌ಎಫ್ ಎಸ್ಪಿ ಜಿತೇಂದ್ರ ಭೇಟಿ ನೀಡಿದ್ದು, ಪ್ರತ್ಯಕ್ಷದರ್ಶಿಯಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.
1990 ರಿಂದ 2012ರ ವರೆಗು ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಉತ್ತುಂಗದಲ್ಲಿತ್ತು. ಸುಮಾರು 40 ರಿಂದ 45 ಸಕ್ರಿಯ ಸಶಸ್ತ್ರ ನಕ್ಸಲರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೀದರ್, ರಾಯಚೂರು, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದರು.
2005 ಮತ್ತು 2012 ರ ನಡುವೆ, ಎಎನ್‌ಎಫ್ ಅಧಿಕಾರಿಗಳ 11 ಎನ್‌ಕೌಂಟರ್‌ಗಳಲ್ಲಿ 19 ನಕ್ಸಲರು ಮೃತಪಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. 2005 ರಲ್ಲಿ ತುಮಕೂರಿನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಂಟು ಜನ ಸಿಬ್ಬಂದಿಗಳು ಮೃತಪಟ್ಟಿದ್ದರು.
ಲಾಲ್ ಸಲಾಂ:
ಇತ್ತೀಚೆಗೆ ಜಿಲ್ಲೆಯ ಬೈಂದೂರು ತಾಲೂಕಿನ ಕಾಡಿನ ಒಳಗೆ ನಕ್ಸಲರಿಂದ ಲಾಲ್ ಸಲಾಂ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‌ಕೌಂಟರ್ ನಡೆದು ೧೯ ವರ್ಷ ಆದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂದು ತಿಳಿದುಬಂದಿದೆ.
೨೦೦೫ರ ಫೆಬ್ರವರಿ ೬ರಂದು ಉಡುಪಿ ಜಿಲ್ಲೆಯ ಮೆಣಸಿನಹಾಡ್ಯದಲ್ಲಿ ಸಾಕೇತ್ ಎನ್‌ಕೌಂಟರ್ ನಡೆದಿತ್ತು. ಇದರಿಂದ ಈ ಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆಗಳಿಗೆ ಬಲವಾದ ಆಘಾತ ಉಂಟಾಗಿತ್ತು. ಹಲವು ವರ್ಷಗಳ ಬಳಿಕ ಪಶ್ಚಿಮ ಘಟ್ಟದಲ್ಲಿ ಮತ್ತೆ ಕೆಂಪು ಧ್ವಜ ಹಾರಾಡುತ್ತಿದ್ದು, ನಕ್ಸಲೀಯ ಚಟುವಟಿಕೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿರುವ ಕುರಿತು ಮಾಹಿತಿಗಳು ಇವೆ. ನಕ್ಸಲ್ ನಾಯಕರ ಹತ್ಯೆಯ ದಿನವನ್ನು ಸಂಘಟನೆಯ ಒಳಗೆ ಹುತಾತ್ಮ ದಿನವನ್ನಾಗಿ ಆಚರಿಸುತ್ತಾರೆ. ಈ ಬಾರಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲೇ ನಡೆಸಲು ಪ್ಲಾನ್ ಹಾಕಿಕೊಳ್ಳಲಾಗಿದೆ.


