ಹೈದರಾಬಾದ್ : ಅನೈತಿಕ ಸಂಬಂಧದ ವ್ಯಾಮೋಹದಲ್ಲಿ ತಾಯಿಯೊಬ್ಬಳು ತನ್ನದೇ ಎರಡು ವರ್ಷದ ಮಗನನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ ಅಮಾನವೀಯ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಸಾವನ್ನು ಮೊದಲಿಗೆ “ಫಿಟ್ಸ್ನಿಂದ ಮೃತಪಟ್ಟಿದ್ದಾನೆ” ಎಂದು ಹೇಳಿ ಅಂತ್ಯಸಂಸ್ಕಾರ ನಡೆಸಲಾಗಿದ್ದರೂ, 20 ದಿನಗಳ ಬಳಿಕ ನಿಜಾಂಶ ಬಯಲಾಗಿದೆ.
ತೆಲಂಗಾಣದ ಸಿದ್ಧಿಪೇಟೆ ಜಿಲ್ಲೆಯ ಜಗದೇವ್ಪುರ ಮಂಡಲದ ತೀಗುಲ್ ಗ್ರಾಮದ ಸ್ವಾಮಿ ಹಾಗೂ ಜ್ಯೋತಿ ದಂಪತಿ ಮೇಡ್ಚಲ್ ಜಿಲ್ಲೆಯ ಕೀಸರ ಪ್ರದೇಶದಲ್ಲಿ ವಾಸವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗಳು ಮತ್ತು ಎರಡು ವರ್ಷದ ಹರಿಕೃಷ್ಣ ಎಂಬ ಮಗನಿದ್ದನು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜ್ಯೋತಿಗೆ ಮದುವೆಗೂ ಮುನ್ನ ನವೀನ್ ಎಂಬಾತನೊಂದಿಗೆ ಪರಿಚಯವಿದ್ದು, ಮದುವೆಯ ನಂತರವೂ ಇಬ್ಬರ ನಡುವೆ ಅನೈತಿಕ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ. ಕಳೆದ ತಿಂಗಳ 29ರಂದು ಪತಿ ಕೆಲಸಕ್ಕೆ ತೆರಳಿದ್ದ ವೇಳೆ ನವೀನ್ ಮನೆಗೆ ಬಂದಿದ್ದಾನೆ. ಈ ವೇಳೆ ಅಳಲು ಆರಂಭಿಸಿದ ಹರಿಕೃಷ್ಣನ ಮೇಲೆ ಜ್ಯೋತಿ ಮತ್ತು ನವೀನ್ ಹಲ್ಲೆ ನಡೆಸಿದ್ದು, ತಲೆಗೆ ಗಂಭೀರ ಗಾಯವಾಗಿ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಮಗುವಿಗೆ ಫಿಟ್ಸ್ ಬಂದು ಸಾವನ್ನಪ್ಪಿದ್ದಾನೆ ಎಂದು ಪತಿಗೆ ನಂಬಿಕೆ ಮೂಡಿಸಿದ ಜ್ಯೋತಿ, ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದ್ದಾಳೆ.
ಆದರೆ ಪತ್ನಿಯ ನಡೆ-ನುಡಿಗಳ ಬಗ್ಗೆ ಅನುಮಾನಗೊಂಡ ಸ್ವಾಮಿ, ಬಂಧುಗಳ ಸಮ್ಮುಖದಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಕೀಸರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಭಾಗವಾಗಿ, ಹೂತುಹಾಕಲಾಗಿದ್ದ ಮಗುವಿನ ಮೃತದೇಹವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿ ಜ್ಯೋತಿಯನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ನವೀನ್ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


