ಸುಳ್ಯ ; ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲೇ ಜಿ ಕೃಷ್ಣಪ್ಪ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಆದರೆ ಮೀಸಲು ಕ್ಷೇತ್ರವಾಗಿರೋ ಸುಳ್ಯದಿಂದ ಆಕಾಂಕ್ಷಿಯಾಗಿದ್ದ ಮಡಿಕೇರಿಯ ಹೆಚ್.ಎಂ.ನಂದಕುಮಾರ್ ಇದರಿಂದ ತೀವೃ ಅಸಮದಾನಗೊಂಡಿದ್ದರು.
ವರಿಷ್ಠರ ಮಾತಿಗೂ ಕಿಮ್ಮತ್ತು ನೀಡದೆ ಸುಳ್ಯ ಕ್ಷೇತ್ರದ ಹಲವೆಡೆ ತಮ್ಮ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರಧರ್ಶನ ಮಾಡಿದ್ರು. ಯಾವುದೇ ಒತ್ತಡಕ್ಕೂ ವರಿಷ್ಠರು ಮಣಿಯದ ಹಿನ್ನೆಲೆಯಲ್ಲಿ ನಾಳೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಲು ನಂದಕುಮಾರ್ ಮುಂದಾಗಿದ್ದಾರೆ.
ಸುಳ್ಯದ ಹಾಲಿ ಶಾಸಕ ಸಚಿವ ಅಂಗಾರ ಅವರಿಗೆ ಬಿಜೆಪಿ ಟಿಕೇಟ್ ನೀಡದೆ ಹೊಸ ಅಭ್ಯರ್ಥಿ ಭಾಗೀರಥಿ ಮುರಳ್ಯ ಅವರಿಗೆ ಟಿಕೇಟ್ ನೀಡಿದೆ. ಇದು ಅಂಗಾರ ಬೆಂಬಲಿಗರ ಅಸಮದಾನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಇದರ ಲಾಭ ಪಡೆದು ಗೆಲುವಿನ ಕನಸು ಕಾಣುತ್ತಿದೆ. ಆದ್ರೆ ಸುಳ್ಯ ಕಾಂಗ್ರೆಸ್ ನಲ್ಲಿ ಉಂಟಾಗಿರೋ ಬಿರುಕು ಕ್ಷೇತ್ರ ಗೆಲ್ಲುವ ಕಾಂಗ್ರೆಸ್ ಕನಸಿಗೆ ತಣ್ಣೀರು ಎರಚಿದೆ. ಹೀಗಾಗಿ ಇಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಹಾಗೂ ಸುಳ್ಯ ಬ್ಲಾಕ್ ಮುಖಂಡರ ಜೊತೆ ಡಿಕೆಶಿ ಸಭೆ ನಡೆಸಲಿದ್ದಾರೆ.
ಎರಡೂ ಬಣಗಳ ಮುಖಂಡರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಭಿನ್ನಾಭಿಪ್ರಾಯ ಬಗೆಹರಿಸುವ ಪ್ರಯತ್ನ ನಡೆಸಿದ್ದಾರೆ. ನಂದ ಕುಮಾರ್ ಗೂ ಕ್ಷೇತ್ರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿರುವ ಕಾರಣ ಕ್ಷೇತ್ರ ಗೆಲ್ಲಲು ಇಬ್ಬರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಅತೀ ಮುಖ್ಯವಾಗಿದೆ.